"ತೆಲುಗು ತಾತ"
"ತೆಲುಗು ತಾತ"
ಶ್ರಮಜೀವಿಯ ಜೀವನ...!
ಈ ಜಗತ್ತೇ ಹೀಗೆ, ತನ್ನ ಹಸಿವನ್ನ ತಣಿಸಿಕೊಳ್ಳಲು, ಬೇರೆಯವರ ಹಸಿವನ್ನು ನೀಗಬೇಕಾಗ್ತದೆ. ಒಂದ್ ಉದಾಹರಣೆ ನೋಡೋಣ. ನೀವು ಹೋಟ್ಲಿಗೆ ಹೋಗ್ತೀರಿ, ಒಂದ್ ದೋಸೆ ತಿಂತೀರಿ ಅನ್ಕೋಳಿ. ಆಗ ನಿಮ್ಮ ಹೊಟ್ಟೆ ಹಸಿವು ನೀಗತ್ತೆ. ನಾವ್ ಕೊಡೋ ಹಣದಿಂದ ಆ ಹೋಟೆಲ್ ಮಾಲಿಕನ ಮತ್ತು ಅಲ್ಲಿ ಕೆಲಸ ಮಾಡೋರ ಹಸಿವು ನೀಗತ್ತೆ. ಹಾಗೇ ಹೋಟೆಲ್ ಲಿ ಅಡ್ಗೆ ಮಾಡಕ್ಕೇ ದಿನಸಿ, ತರಕಾರಿಗಳೂ ಯಾರೂ ಪುಗಸಟ್ಟೆ ಕೊಡಲ್ಲ. ಹಾಗಾಗಿ ಅದ್ರಿಂದ ದಿನಸಿ ಅಂಗಡಿ ಮಾಲಿಕನ ಮತ್ತೆ ಬೆಳೆದ ರೈತನ, ಹೊತ್ತು ಅಂಗಡಿಗೆ ತಂದ ವಾಹನ ಮಾಲಿಕನ, ಎತ್ತಾಕಿದ ಕೂಲಿ ಕಾರ್ಮಿಕನ ಹೀಗೇ ಹಲವರ ಹಸಿವನ್ನ ತಣಿಸಿರತ್ತೆ. ಇಟ್ಸ್ ಎ ಹ್ಯೂಮನ್ ಫುಡ್ ಸೈಕಲ್.
ಇದೆಲ್ಲಾ ಹೊಟ್ಟೆ ಹಸಿವಿನ ವಿಚಾರವಾದರೇ, ಕೆಲವರಿಗೆ ಜ್ಞಾನದ ಹಸಿವು. ಇನ್ನು ಕೆಲವರಿಗೆ ದೇಹ ಹುರಿಗೊಳಿಸಿವ ಹಸಿವು. ಕೆಲವರಿಗೆ ಮನೋರಂಜನೆಯ ಹಸಿವಾದರೇ, ಕೆಲವರಿಗೆ ಕಾಮದ ಹಸಿವು. ಹಸಿವ ತಣಿಸುವುದೂ ಕೂಡ, ಮತ್ತೇ ತಮ್ಮ ಹಾಗೂ ತಮ್ಮವರ ಹಸಿವ ತಣಿಸಲೋಸುಗವೇ. ಆಯಾ ಹಸಿವಿಗೆ, ಆಯಾ ಜಾಗಕ್ಕೇ ಹೋಗಬೇಕು. ಹೊಟ್ಟೆಯ ಹಸಿವ ತಣಿಸಲು ಶಾಲೆಯ ಗುರುವಿನ ಬಳಿ ಹೋದರೇ ಬಿಸಿಯೂಟದ ಊಟವನ್ನು ಒಂದೆರಡು ದಿನ ಕೊಟ್ಟಾರು ಅಷ್ಟೇ.
ಹಾಗೇ ಇನ್ನೊಂದು ವಿಷಯ ನೋಡಿ, ಹಸಿವು ಎಷ್ಟಿದೆಯೋ ಅಷ್ಟೇ ತಿನ್ನಬೇಕು. ಅತೀ ಆಸೆಯಿಂದಾ ಎಲ್ಲವೂ ನನಗೊಬ್ಬನಿಗೇ ಬೇಕು ಎಂದರೇ, ಅಜೀರ್ಣವಾಗದೇ ಇರದು. ಅಲ್ಲದೇ "ಹೊಟ್ಟೆ ತುಂಬಿದವನಿಗೆ ಹೋಳಿಗೆಯೂ ಕಹಿ" ಅನ್ನೋವಂತೇ, ಹಸಿವಿಲ್ಲದವನಿಗೇ ಅದರ ತೂಕ ತಿಳಿಯೋದೂ ಇಲ್ಲ. ಅದರ ಮೌಲ್ಯ ತಿಳಿಯದೇ ಅದು ನಿಮಗೆ ದಕ್ಕೋದೂ ಇಲ್ಲ.
ಇಷ್ಟೆಲ್ಲ ಪೀಟೀಲು ಹಾಕಲು ಕಾರಣವಿದೆ. ಕೆಲವೇ ಕೆಲವು ತಿಂಗಳ ಹಿಂದಿನ ವರೆಗೂ ನನ್ನದೂ ಹೀಗೆಯೇ ಹಸಿವನ್ನು ತಣಿಸುವಾ ಕೆಲಸವೇ. ಜ್ಞಾನದ ಹಸಿವಿನಿಂದ ಬರುವ ಎಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಜ್ಞಾನದ ಊಟವನ್ನು ಉಣಬಡಿಸುವ ಪುಣ್ಯಕರ ಕೆಲಸ ನನ್ನದಾಗಿತ್ತು. ಆಗ ವೃತ್ತಿಯಲ್ಲಿ ನಾನು ಶಿಕ್ಷಕ, ಜ್ಞಾನದ ಹಸಿವ ನೀಗಿಸುವುದು ನನ್ನ ಕಾಯಕ.
ಸರಿಸುಮಾರು 5 ವರ್ಷಗಳಿಂದ ಬೆಂದಕಾಳೂರಿನಲ್ಲಿದ್ದ ನನಗೆ, 2019 ಜುಲೈನಲ್ಲಿ ಕೆಲಸದೋಸುಗ ವಿಜಯವಾಡದ ಬಿರು ಬಿಸಿಲಿನಲ್ಲಿ ಬೇಯುವ ಯೋಗ ಪ್ರಾಪ್ತಿಯಾಗಿತ್ತು. ಅಲ್ಲಿಯೂ ಅದೇ ಕಾಯಕ. ಅವತ್ತು ಅಲ್ಲಿ ಹೋದ ಮೊದಲನೇ ದಿನವೇ ನನಗೆ ನನ್ನ ದೃಷ್ಠಿ ನೆಟ್ಟಿದ್ದು ಈ ತಾತನ ಕಡೆಗೆ. ಸುಮಾರು 80 ರ ಆಸುಪಾಸಿನ ವೃದ್ಧ. ಮೊದಲ ದಿನವೇ ಆಫೀಸಿನ ಬಳಿ ಬಂದಾಗ, ಒಮ್ಮೆ ಅವರೆಡೆಗೆ ನೋಡಿ ಕಿರುನಗೆ ಬೀರಿದ್ದಷ್ಟೇ. ಅಷ್ಟಕ್ಕೇ ನಾನೇನೋ ಬಹಳ ವರ್ಷಗಳಿಂದ ಪರಿಚಯವಿರುವವನಂತೆ, "ಏಮ್ರಾ ಬಾಬು, ಬಾಗುನ್ನಾರಾ ? ನಾಷ್ಟಂ ಆಯಿಂದಾ?"("ಏನಪ್ಪಾ, ಚೆನ್ನಾಗಿದ್ದೀಯಾ, ತಿಂಡಿ ಆಯ್ತಾ?") ಎಂದು ಕೇಳಿದಾಗ "ಆಯಿಂದಿ ತಾತಗಾರು, ಮೀದೀ?" ("ಆಯ್ತು ತಾತಾ, ನಿಮ್ಮದು? ") ಎಂದು ಕೇಳದೇ ಇರಲು ಮನಸಾಗಲಿಲ್ಲ.
ಒಂದ್ ವಿಷ್ಯ ನೋಡಿ, ನಾನ್ಯಾರೆಂದೇ ಗೊತ್ತಿಲ್ಲದಿದ್ದರೂ ನನ್ನ ಕುಶಲೋಪರಿ ವಿಚಾರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಸಿವು ಈ ತಾತನಿಗೆ. ಅಂತಹಾ ವಿಜಯವಾಡದ 36°-40° ಬಿರು ಬಿಸಿಲಿನಲ್ಲೂ, ತನ್ನ ಸೈಕಲ್ಲಿನ ಮೇಲೆ ಕೂತು ಸಿಗಾರ್ ಸೇದುತ್ತಾ ಇರ್ತಿದ್ರು. ಆದರೂ ಈ ಇಳಿ ವಯಸ್ಸಿನಲ್ಲೂ ದುಡಿಯುತ್ತಿರುವ ತಾತನ ಬಗೆಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿ, ಮಾತಾಡೋಣವೆಂದರೇ ತಾತನಿಗೆ ಕನ್ನಡ ಬರಲ್ಲ. ಮತ್ತೇ ಬರಿಯ ಫಿಲಂಗಳನ್ನೇ ನೋಡಿ ತೆಲುಗು ಕಲಿತಿದ್ದ ನನ್ನ ತೆಲುಗೋ ಆ ಬಾಲಯ್ಯ ಬಾಬುಗೇ ಪ್ರೀತಿ.
ಆ ತಾತನ ಮಾತನಾಡುವ ಆ ದಿನವೂ ಬಂದೇ ಬಿಡ್ತು. ನನ್ನ ಸಹೋದ್ಯೋಗಿಗಳ ಸಹಾಯದೊಂದಿಗೆ ಆ ತಾತನ ಬಳಿಹೋಗಿ ವಿಚಾರಿಸಿದೆವು. ಮನುಷ್ಯನಿಗೆ 81ರ ಯೌವನ, ಯೌವನ ಎನ್ನಲು ಕಾರಣ ನಮ್ಮ ನಿಮ್ಮಂತಹಾ 18ರ ಯುವಕರಿಗಿಂತಲೂ ಗಟ್ಟಿ ಜೀವ ಆ 'ಸತ್ಯನಾರಾಯಣ'ರದ್ದು. ಹೂ, ಅವರ ನಾಮಧೇಯ ಸತ್ಯನಾರಾಯಣ. ಮೊದಮೊದಲು ವ್ಯವಸಾಯ ಮಾಡಿ ದುಡಿಯುತ್ತಿದ್ದ ಜೀವಕ್ಕೇ, ಅವರ ಸಂಬಂಧಿಗಳೇ ದ್ವೇಷಿಗಳಾಗಿ, ಆ ವ್ಯವಸಾಯದ ಜಾಗವನ್ನೂ ಕಬಳಿಸಿದ್ದಾಯ್ತು. ತದನಂತರದ ಯೌವನವನ್ನು ಊಟಿ, ವಿಜಯವಾಡ, ಹೈದರಾಬಾದ್, ಚೆನ್ನೈ, ಬೆಂಗಳೂರು ಎಂದು ಬೇರೆ ಬೇರೆ ಊರುಗಳಲ್ಲಿ ಕೆಲಸಮಾಡಿ, ಕೊನೆಗೊಂದು ಮದುವೆಯಾದರಂತೆ.
ಹೀಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಸತ್ಯನಾರಾಯಣರಿಗೆ ಒಬ್ಬ ಗಂಡು ಮಗ ಹುಟ್ಟಿದ. ಆದರೇ ಅವನು ಹುಟ್ಟಿದ ಕೆಲವೇ ತಿಂಗಳಿಗೆ ಮಡದಿಯನ್ನು ಕಳೆದುಕೊಂಡ ಇವರು, ಮಗನಿಗೆ ತಂದೆ ತಾಯಿ ಎರಡೂ ಆಗಿ ಬೆಳೆಸಿದರು. ಅವನನ್ನು ಕಾಲೇಜಿಗೂ ಕಳಿಸಿದರು. ಅವನಿಗೋ ವಿದ್ಯ ನೈವೇದ್ಯ. ಕಾಲೇಜು ಬಿಟ್ಟ ಅವನ ಕೈ ಹಿಡಿದಿದ್ದು ಗಾರೇ ಕೆಲಸ ಮತ್ತು ಅವಳು. ಅವಳ ಕೈರುಚಿ ಹಿಡಿಸಿದಾಗ ಅವನಿಗೆ ತಂದೆ ಬೇಡವಾದರು. ಆದರೂ ತಾತ ಕೊರಗಲಿಲ್ಲ. ಇವತ್ತಿಗೂ ತನ್ನ ಹಸಿವನ್ನು ತಾನೇ ದುಡಿದು ತೀರಿಸಿಕೊಳ್ಳುತ್ತಾರೆಯೇ ಹೊರತು, ಯಾರಿಗೂ ಅವಲಂಬಿತರಾಗಿಲ್ಲ.
ಅದ್ರೂ ಅವ್ರ ಕಥೆನಾ ಕೇಳಿದ್ಮೇಲೆ, ಅವರ ವಾಸ ಎಲ್ಲಿ ಎಂದು ತಿಳ್ಕೊಳ್ಳೋಣ ಅನಸ್ತು. ಅವರನ್ನ ಅದೇ ಪ್ರಶ್ನೆ ಕೇಳ್ದಾಗ ನಮ್ಮ ಆಪೀಸಿನ ಎದುರುಗಡೆಯ ಜಾಗ ತೋರ್ಸಿ, ನನಗೊಬ್ಬನಿಗೆ ಮಲಗಲಿಕ್ಕೆ ಇನ್ನೆಷ್ಟು ಜಾಗ ಬೇಕು ಎಂದಾಗ ನನ್ನ ಬಾಯಿಂದ ಉತ್ತರ ಹೊರಡಲಿಲ್ಲ. ಇನ್ನೊಂದು ಏನಂದ್ರೇ ಆ ವಿಜಯವಾಡದ ಸೆಖೆಗೆ ನಮಗೆ ಎ.ಸಿ. ಇಲ್ಲದೇ ನಿದ್ರೇ ಕನಸಿನ ಮಾತೇ. ಅಂತಾದ್ರಲ್ಲಿ ಈ ಜಾಗದಲ್ಲಿ ಅವರ ವಾಸ, ನಂಬಲಸಾಧ್ಯ. ಆದರೇ ಅದೇ ಸತ್ಯ. ಸುಮ್ಮನಿರದ ನಾದು "ಅಲ್ಲಾ ತಾತ ಸಂಬಳ" ಎಂದೆ. ಅದಕ್ಕವರು "ಸಂಬಳ ? ನನಗ್ಯಾಕೆ ಬಾಬು ಸಂಬಳ? ಆ ಅಂಗಡಿಯೋರು ಅವ್ರುದ್ದೇ ಒಂದು ಸೈಕಲ್ ಕೊಟ್ಟಿದ್ದಾರೆ. ಅವ್ರು ಹೇಳಿದ್ ಸಣ್ಣ ಪುಟ್ಟ ಕೆಲಸ ಮಾಡ್ತೀನಿ, ಊಟ ಹಾಕ್ತಾರೆ. ಟೀ ಕೊಡ್ತಾರೆ. ಇನ್ನು ನನ್ನ ಈ ಸಿಗಾರ್ ಚಟಕ್ಕೆ, ಅದನ್ನೂ ಅವ್ರೇ ಕೇಳಿದಾಗ ಕೊಡ್ತಾರೆ. ನನಗೆ ಇನ್ನೇನು ಬೇಡ ಬಾಬು" ಅಂದು ನಗುತ್ತಲೇ ಎದ್ದು ನೆಡೆದರು.
ಒಮ್ಮೆ ಯೋಚಿಸಿ, ನಮಗೆ ಎಷ್ಟೇ ಸುಖವಿದ್ದರೂ ಇನ್ನೂ ಬೇಕು. ಆದರೇ, ಅವೆಲ್ಲ ಭೋಗ್ಯಕ್ಕೇ ಹೊರತು ಆರೋಗ್ಯಕರ ಸರಳ ಜೀವನಕ್ಕಲ್ಲ. ಲಕ್ಷ ಲಕ್ಷ ಸಂಬಳ ಎಣಿಸುವ ಕೈಗೂ ಒಂದೇ ಆಸೆ "ಇನ್ನೂ ಬೇಕು" ಎಂಬುದಷ್ಟೇ. ಹಸಿವನ್ನೂ ಮೀರಿ ತಿಂದರೆ ಅಜೀರ್ಣವಾಗುವುದಲ್ಲ, ಅದನ್ನ ಜನರ ಕಣ್ಣಿಂದ ತಪ್ಪಿಸಲು ಬೇರೆ ಬೇರೆ ತರಹೇವಾರಿ ಕಣ್ಕಟ್ಟುವಿಕೆ. ಅದೆಷ್ಟು ಸ್ವಾರ್ಥಿಗಳಾಗಿದ್ದೇವೆ ನಾವು ?
ಅದೇ ಕಾರಣಕ್ಕೆ ನನ್ನನ್ನೂ ಸೇರಿ ಎಲ್ಲ ಹೊಟ್ಟೆಬಾಕರ ನಡುವೆ ಈ ತಾತ ನನಗೆ ಹೀರೋ ನಂತೆ ಕಂಡದ್ದು. ಅದಾಗಲೇ ಇವರನ್ನು ನೋಡಿ 1 ವರ್ಷ ಕಳಿದಿದೆ. ಇಂತಹಾ ಅದೆಷ್ಟೋ ಹೀರೋಗಳು ಈ ಕೊರೋನಾದ ಕಾಲದಲ್ಲಿ ಎನಾಗಿದ್ದಾರೋ ????
- ಕೆ. ಸಿ. ಪಿ. ಕಾರಂತ್
ಕಮ್ಮರಡಿ
3/8/20 11:33 PM
Comments
Post a Comment