ಮಾಟಗಾತಿಯ ಜೀಪಿನಲಿ ಭಾಗ - 2

"ನರ ಬಲಿ...!!!"

ಭಯದ ನೆರಳಲ್ಲಿ...



(ಇಲ್ಲಿಯವರೆಗೆ : ಸಕಲೇಶಪುರಕ್ಕೆ ಪ್ರವಾಸ ಹೊರಟ ನಾವು, ಮಲ್ಲಳ್ಳಿ ಜಲಪಾತ ಮತ್ತು ಪುಷ್ಪಗಿರಿಯ ಸೊಬಗ ಸವಿದು, ಹಿಂದಿರುಗಿವಾಗ ದಾರಿ ತಪ್ಪಿದ್ದಲ್ಲದೆ, ಕಾರು ಸ್ಟಾರ್ಟ್ ಆಗದೇ, ಅಲ್ಲೇ ಮಲಗಲನುವಾಗಿದ್ದಗ ಜೀಪಿನ ಸದ್ದನ್ನು ಕೇಳಿ ಎಲ್ಲರೂ ಎದ್ದು ಕಾದು ಕುಳಿತಿದ್ದಾಗಿತ್ತು)

  ಜೀಪು ದೂರದ ತಿರುವಿನಲ್ಲಿ ಬರ್ತಾ ಇದ್ದಿದ್ದು ಕಾಣ್ತಾ ಇತ್ತು. ಹಳೆಯ ಮಾಡೆಲ್ ಗಾಡಿ. ಸುಮಾರು 1997-98 ರ ಮಾಡೆಲ್ ಇರ್ಬೋದು. ಮಿಲಿಟರಿ ಜೀಪು ಅದು. ಜೀಪಿನ ಹೆಡ್ಲೈಟ್ ಬೆಳಕು ನಮ್ಮ ಕಡೆಗೇ ಬರ್ತಾ ಇದೆ. ಆ ಜಲ್ಲಿ ದಾರಿಯಲ್ಲೂ 40-50 ಕಿಲೋಮೀಟರ್ ಓಟದಲ್ಲಿ ಬಂದು ನಮಗೆ ಸ್ವಲ್ಪೇ ಸ್ವಲ್ಪ ದೂರದಲ್ಲಿ ನಿಂತಿತು. ಆ ಓಟದಲ್ಲಿದ್ದ ಜೀಪು ಸರಕ್ಕನೆ ಬ್ರೇಕು ಹಾಕಿದ್ದರ ಪರಿಣಾಮ, ಚಕ್ರದ ತುದಿಗೆ ಸಿಕ್ಕ ಜಲ್ಲಿ ಕಲ್ಲುಗಳು ಹಾರಿ, ಘಾಟಿಯ ಕೆಳಗಡೆ ಬೀಳುವ ಸದ್ದು ಕೇಳಿಸ್ತು.

  ಅರೆ, ಗಾಡಿ ಓಡುಸ್ತಾ ಇರೋದು ಒಂದು ಹೆಂಗಸು. ನೋಡಲು ಹಿಡಿಂಬಾ ಗಾತ್ರ. ಸುಡುವ ಕೆಂಗಣ್ಣುಗಳು. ಕಡುಗಪ್ಪು ಬಣ್ಣದ ಬಟ್ಟೆಯನ್ನು ಉಟ್ಟಿದ್ದಾಳೆ. ಹಣೆಯ ಮೇಲೆ 10 ರೂಪಾಯಿ ನಾಣ್ಯದಷ್ಟು ಅಗಲದ ಕುಂಕುಮ.ಗಂಟಿಕ್ಕಿದ, ಸಿಡುಕು ಮುಖ. ಸಾಮಾನ್ಯ 6 ಅಡಿಯ ಎತ್ತರ ಮತ್ತು ನೂರರಿಂದ ನೂರಿಪ್ಪತ್ತು ಕೆಜಿ ತೂಗಬಹುದು ( ನಿಮ್ಮ ಕಲ್ಪನೆಗೆ ಹೇಳಿದ್ದಷ್ಟೇ). ಆ ಹೆಂಗಸಿನ ಪಕ್ಕದ ಸೀಟಿನಲ್ಲಿ ಒಬ್ಬ ಅಜ್ಜ. ಸುಮಾರು 70 ವರ್ಷ ದಾಟಿದ ಮುದುಕ. ಬಲಗೈಗೆ ಲಕ್ವ ಹೊಡೆದಿದೆ. ಎಡಗಾಲು ಜೀಪಿನಿಂದ ಹೊರಗಿದೆ. ಪೂರ್ಣ ಬಿಳಿಯ ಗಡ್ಡ. ಹಲ್ಲುಗಳೆಲ್ಲ ಕಪ್ಪು ಕಪ್ಪು. ಜೀಪಿನಲಿ ಅವರಿಬ್ಬರ ಬಿಟ್ಟರೇ ಇನ್ಯಾರೂ ಇದ್ದಂತೆ ತೋರಲಿಲ್ಲ.  ನೋಡಿದರೇ ಎಂತಹವರನ್ನೂ ನಡುಗಿಸುವ ಚಹರೆ ಇಬ್ಬರದ್ದೂ.

  ಅವರು ಅದಾಗಲೇ ನಮ್ಮನ್ನು ನೋಡಿದ್ದಾರೆ. ಇನ್ನೆಲ್ಲಿ ಹೋಗೋದು? ಆ ವಿಕಾರಿ ಮುದುಕ ಜೀಪಿನಿಂದ ಇಳಿದು ಬಂದ. ಅವನು ಜೀಪಿನಿಂದ ಇಳಿದು ನಮ್ಮೆಡೆಗೆ ಬರುವಾಗಲೇ ನಮಗೆ ಗೊತ್ತಾಗಿದ್ದು, ಅವನ ಎಡಗಾಲೂ ಲಕ್ವ ಹೊಡೆದಿದೆ ಎಂದು. ಬಿಳಿಯ ಅಂಗಿ, ನೀಲಿ ಲುಂಗಿ ಉಟ್ಟು, ಕುಂಟುತ್ತಾ ನಮ್ಮ ಬಳಿ ಬರುತ್ತಿದ್ದಾನೆ. ಹತ್ತಿರಾಗುತ್ತಿದ್ದಂತೇ, ಎಲ್ಲರ ಕಾಲೂ ನಡುಗಲಾರಂಭಿಸಿತು. ಹಾಗಂತ ನಾನೇನು ಮಹಾ ಧೈರ್ಯವಂತ ಎಂದಲ್ಲ. ಆದರೂ ಅದೇನೋ ಹುಚ್ಚು ಧೈರ್ಯ ಮಾಡಿ, ಮುಂದೆ ಹೋದೆ. 

  "ಏನು, ಈ ಕಾಡದಾರಿಯಲ್ಲಿ?" ಅವನಂದ.

  "ಪುಷ್ಪಗಿರಿಗೆ ಹೋಗಿ, ಸಕಲೇಶಪುರಕ್ಕೆ ಹೋಗುತ್ತಿದ್ದೇವೆ. ಕಾರು ಏಕೋ ಕೈ ಕೊಟ್ಟಿದೆ, ಅದಕ್ಕೇ...." ನಾನು ಭಯದ ನಡುಗುವ ಸ್ವರದಲ್ಲಿ ರಾಗ ಎಳೆದೆ. 

  ಅವರನ್ನು ಕಂಡೇ ಭಯಗೊಂಡಿದ್ದ ನಮಗೆ, ಮತ್ತೆ ಕಾರಿನೊಳಕ್ಕೆ ಸೇರಿಕೊಂಡರೇ ಸಾಕಾಗಿತ್ತು. ಆದರೇ ಆ ಮುದುಕ ಬಿಡುವಂತೆ ತೋರಲಿಲ್ಲ.

  "ಸಕಲೇಶಪುರಕ್ಕೆ ಹೊರಟವರಿಗೆ, ಈ ಗಡಿಕಲ್ಲಿನ ಕಾಡುದಾರಿಯಲ್ಲಿ ಏನು ಕೆಲಸ?" ಯೇನೋ ಅನುಮಾನದ ಧ್ವನಿಯಲ್ಲಿ ಕೇಳಿದ. ನಮಗೆ ಭಯ ಹೆಚ್ಚಾಗುತ್ತಿದೆ.

  "ಅಲ್ಲಾ, ದಾರಿ ತಪ್ಪಿದ್ದೇವೆ. ಅದಲ್ಲದೇ, ಕಾರೂ ಕೈಕೊಟ್ಟಿದೆ. ಪರ್ವಾಗಿಲ್ಲ ಬಿಡಿ, ಇಲ್ಲೇ ಕಾರಿನಲ್ಲೇ ಇದ್ದು, ಬೆಳಿಗ್ಗೆ ಎದ್ದು ಹೊರಡುತ್ತೇವೆ. ನೀವು ಹೊರಡಿ." ನಾನಂದೆ.

  ಅವರಿಂದ ತಪ್ಪಿಸಿಕೊಂಡರೇ ಸಾಕಾಗಿತ್ತು ನಮಗೆ. ಅಲ್ಲದೇ ಇಷ್ಟಲ್ಲಾ ಮಾತಾಡಿದರೂ, ಆ ಜೀಪಿನೊಳಗಿನ ಹೆಂಗಸು ನೆಟ್ಟ ದೃಷ್ಟಿ ನೆಟ್ಟಂತೆ ನಮ್ಮ ಕಡೆಗೇ ಇದೆ. ಅಷ್ಟರೊಳಗೇ ಜೀಪಿನೊಳಗಿಂದ ಆ ಹೆಂಗಸು, ಆನೆ ಘೀಳಿಟ್ಟಂತೆ "ಲೇ, ಮಾರಾ...." ಎಂದಳು.

  "ಹಾ ಅಮ್ಮೋರೇ, ಬಂದೇ.. ಬಂದೇ..." ಮುದುಕ ಅತ್ತಕಡೆಗೆ ಕುಂಟುತ್ತಲೇ ಓಡಿದ. ಆಗಲೇ ಗೊತ್ತಾಗಿದ್ದು ಮುದಕನ ಹೆಸರು ಮಾರ ಎಂದು.

  ಇನ್ನೇನು ನಾವು ಇದೇ ಸಮಯ ಎಂದು ಕಾರಿನೊಳಕ್ಕೆ ಸೇರಬೇಕು. ಅಷ್ಟರಲ್ಲೇ, ಜೀಪಿನ ಕಡೆಗೆ ಹೋದ ಮಾರ ಅದೇ ವೇಗದಲ್ಲೇ ತಿರುಗಿ ನಮ್ಮೆಡೆಗೆ ಓಡಿ ಬಂದ.

  "ಅಮ್ಮೋರು ಹೇಳ್ತಾ ಇದ್ದಾರೆ, ನೀವೂ ನಮ್ಮೊಡನೆ ಬರ್ಲೇ ಬೇಕೆಂದು."

  ಒಮ್ಮೆಲೆ ಎದೆ ಧಸಕ್ ಎಂದಿತು. ಅವರಿಂದ ತಪ್ಪಿಸಿಕೊಡಿದ್ದರೇ ಸಾಕೆಂದಿದ್ದ ನಮಗೆ, ಅವರ ಜೊತೆಗೇ ಹೋಗಬೇಕೆಂದಾಗ ಹೇಗಾಗಿರಬೇಡ ಯೋಚ್ನೆ ಮಾಡಿ.

  "ಇಲ್ಲ, ಇಲ್ಲಾ, ಪರ್ವಾಗಿಲ್ಲ ಬಿಡಿ. ನೀವ್ ಹೊರಡಿ" ನಾನು ಹೇಳಿದೆ.

  "ಹೇಳಿದ್ದು ಅರ್ಥ ಆಗಲ್ವಾ? ಬರ್ಬೇಕು ಅಷ್ಟೇ. ನೋಡಿ ಈ ಜಾಗ ಸರಿಯಿಲ್ಲ. ರಾತ್ರಿ ಭೂತ, ಪ್ರೇತಗಳು ಓಡಾಡೋ ಜಾಗ. ನಮ್ಮ ಜೊತೆಗೆ ಬನ್ನಿ ಅಂದ್ರೇ ಬರಬೇಕಷ್ಟೇ." ಸಿಟ್ಟಿನಿಂದ ಗುಡುಗಿದ ಆ ಮುದುಕ.

  ಆ ಕತ್ತಲ ರಾತ್ರಿಯಲ್ಲಿ, ಜೀಪಿನ ಮಂದ ಬೆಳಕಿನಲಿ, ಆ ಹೆಂಗಸೇ ಮಾಟಗಾತಿ, ಈ ಕುಂಟಜ್ಜನೇ ಪಿಶಾಚಿಯಂತೆ ನಮಗೆಲ್ಲರಿಗೂ ಅದಾಗಲೇ ಅನಿಸಿತ್ತು. ಆದರೂ ಅವನೇಕೋ ಬಿಡುವಂತೆ ಕಾಣಲಿಲ್ಲ. ನಮಗೋ ಭಯ ಇನ್ನೂ ಹೆಚ್ಚಾಗ ತೊಡಗಿತ್ತು. ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡೆವು. ಅಷ್ಟರಲ್ಲಿ,

  "ತಡವಾಗ್ತಿದೆ, ಹೊರಡ್ರಯ್ಯಾ..." ಎಂದು ಖಾರವಾಗಿ‌‌ ಹೇಳ್ದಾ.

  ಬೇರೆಯ ವಿಧಿಯೇ ಕಾಣದೇ, ಜೀಪಿನೊಳಕ್ಕೆ ಕಾಲಿಟ್ಟೆವು. ಒಮ್ಮೆಲೆ ಜೋರಾದ ಗಾಳಿ ಬೀಸಿತು. ಮೈ ಮರಗಟ್ಟುವಂತಾ ಛಳಿ ಬೇರೆ. ಮನಸ್ಸಲ್ಲೇ, ' ಇಲ್ಲೇನೋ ಸಮಸ್ಯೆ ಖಂಡಿತಾ ಇದೆ' ಅನಿಸ್ತಿತ್ತು. ನಮ್ಮ ಕಣ್ಣುಗಳು ಆ ಹೆಂಗಸಿನ ಕಡೆಗೆ ನೆಟ್ಟವು. (ಮೆನ್ ವಿಲ್ ಬಿ ಮೆನ್ ಅನ್ಬೇಡಿ. ನಮ್ ಕಷ್ಟ ನಮ್ಗೇ ಗೊತ್ತು.) ಹಣೆಯ ಕುಂಕುಮ ಮಾತ್ರ ಕಂಡಿದ್ದ ನಮಗೆ ಈಗ, ಸಾಲು ಸಾಲು ರುದ್ರಾಕ್ಷಿ ಸರ ಕಾಣಿಸಿತು. ಅಲ್ಲದೇ, ಅನಾದಿ ಕಾಲದಿಂದಲೂ ನಗುವೇ ಕಾಣದ, ಗಂಟಿಕ್ಕಿದ, ಆ ಹೆಂಗಸಿನ ಮುಖವ ನೋಡಿ ಭಯದಲ್ಲೇ ಉಗುಳು ನುಂಗಿಕೊಂಡೆವು. 

  ಅದೆಲ್ಲಿ ಹಾಳಾಗಿತ್ತೋ ನರಿ, ಅದೇ ಸಮಯಕ್ಕೆ ಸರಿಯಾಗಿ "ಓ....ssss" ಎಂದು ಕೂಗಿದ್ದು ಕೇಳಿ, ನಮ್ಮ ಚಡ್ಡಿಯೆಲ್ಲಾ ಒದ್ದೆಯಾಯಿತು ಎಂದೇ ಅಂದುಕೊಂಡೆ. ಪುಣ್ಯ, ಆಗಿರಲಿಲ್ಲ.

  ನರಿಯ ಆರ್ಥನಾದ ಕೊನೆಯಾಗುವ ಮೊದಲೇ ಜೀಪು ಆ ಕಡಿದಾದ ದಾರಿಯಲ್ಲಿ ಸಾಗಿತು. ಗಾಡಿಯ ಒಳಗೆಲ್ಲಾ ಅದೇನೋ ಘಮಟು ಹೊಗೆಯ ವಾಸನೆ. ಬಾಯಾರಿಕೆಯಾದರೂ ನೀರು ಕೇಳುವ ಧೈರ್ಯ ಮಾಡಲಿಲ್ಲ. ಘಾಟಿಯ ತಿರುವುಗಳಲ್ಲಿ ತಿರುಗಿದಾಗಲೆಲ್ಲಾ, ನಮ್ಮ ಸೀಟಿನ‌ ಕೆಳಗೆ ಅದೇನೋ ಉರುಡುವ ಸದ್ದು. ಅದೇನು? ಅಲ್ಲಾ ನಮಗ್ಯಾಕೆ? ಇವರು ನೋಡಿದರೇ, ಮಾಟಗಾರರಂತೆ ಕಾಣುತ್ತಾರೆ. ಇನ್ನು ಅಲ್ಲಿ ಕೈ ಹಾಕಿ, ಕೊನೆಗೆ ತಲೆಯ ಬುರುಡೆಯೇನಾದರೂ ಸಿಕ್ಕಿದರೇ? ಬೇಡಪ್ಪಾ ಬೇಡ. ಅಮಾಸೆಯ ರಾತ್ರಿ ನಮಗ್ಯಾಕಪ್ಪಾ ಅದೆಲ್ಲಾ? 

  ಅದೇ ಭಯದ ವಾತಾವರಣದ ನಡುವೆಯೇ, ಅದೇಕೋ ಕಾಲು ತುರಿಸಿದಂತಾಗಿ, ಮೊಣಕಾಲಿನ ವರೆಗೆ ಕೈಚಾಚಿ, ಕೆರಕೊಂಡೆ. ಅದೇನೋ ಮರದ ತುಂಡಿನಂತೆ ಕೈಗೆ ತಾಗಿತು. ಧೈರ್ಯ ಮಾಡಿ, ಉಸಿರು ಭಲವಾಗಿ‌‌ ಹಿಡಿದು, ಅದನ್ನು ಹಿಡ್ಕೊಂಡೆ. ಮನುಷ್ಯರ ಮೊಣಕೈ ಮೂಳೆಯಂತೆ ಕಂಡಿತು. ಹಿಡಿದ ಉಸಿರು ಅಲ್ಲೇ ನಿತ್ತಿತ್ತು.

  ಜೀಪು ಕಾಡಿನ ನಡುವೆ ಮುಂದೆ ಸಾಗಿತ್ತು. ಬರುಬರುತ್ತಾ ದಾರಿ ಇನ್ನಷ್ಟೂ ಕಠಿಣವಾಗಿತ್ತು. ಕೊನೆಗೆ  ಜೀಪು ಒಂದು ಪಾಳುಬಿದ್ದ ದೇಗುಲದ ಎದುರಲ್ಲಿ, ಕುಯ್ಯೋ..sss ಎಂದು ಬ್ರೇಕಿನ ಸದ್ದು ಮಾಡುತ್ತಾ ನಿಂತಿತ್ತು. 

  "ಹ್ಙೂಂ... ಇಳೀರಿ..." ಜೈಲು ಖೈದಿಗಳಿಗೆ ಹೇಳುವಂತೆ ಆಗ್ನಾಪಿಸಿದ. 

  ನನಗೆ ಆಗಲೇ ಗೊತ್ತಾಗಿದ್ದು, ನನ್ನ ಬಿಟ್ಟು ಉಳಿದ ನಾಲ್ವರೂ ಆಂಜನೇಯನ ಜಪದಲ್ಲಿ ಮುಳುಗಿದ್ದಾರೆಂದು. 

  ದೇಗುಲದ ಒಳಗೆ ಒಂದು ಸಣ್ಣ ದೀಪ ಉರಿಯುತ್ತಿದೆ‌. ಆ ದೀಪದ ಮಂದ ಬೆಳಕಿನಲ್ಲಿ, ಅದು ಯಾವುದೋ ಕ್ಷುದ್ರ ದೇವರ ದೇಗುಲ ಎಂದು ಭಾಸವಾಗ್ತಾ ಇದೆ. ಅವರಿಬ್ಬರ‌ ಜೊತೆಗೆ ನಾವೈದು ಜನ‌ ಬಿಟ್ಟರೇ ಇನ್ಯಾರೂ ಇಲ್ಲ. ಅಷ್ಟರಲ್ಲೇ ಆ ಮಾಟಗಾತಿಯ ಪೂಜೆ ಆರಂಭವಾಯಿತು. ಅದೇನೋ ಆವರಣ ಪೂಜೆ. ನಾವು ನೀವು ಮನೆಯಲ್ಲಿ ಮಾಡುವ ಪೂಜೆಯಂತದ್ದಲ್ಲ. ಅಲಂಕಾರವೇ ರೌದ್ರ. ಸೂಜಿಗಳು ಚುಚ್ಚಿದ ಮಣ್ಣಿನ ಗೊಂಬೆ. ಅದೇನೋ ಮಂಡಲ. ನೋಡಿದವರಿಗೇ ಗೊತ್ತು ಕ್ಷುದ್ರ ಪೂಜೆಯ ಭಯಾನಕತೆ.

  ಸ್ವಲ್ಪ ಸಮಯದ ನಂತರ, ಅವಳ ಮಂತ್ರಗಳು ನಿತ್ತವು. ಮಂಗಳಾರತಿಯೇನೂ ಆಗಿಲ್ಲ ಇನ್ನೂ. ಹೌದು ಅವಳು ಆ ದೇಗುಲದಿಂದ ಹೊರಬರುತ್ತಿದ್ದಾಳೆ. ಕೈನಲ್ಲಿ ಒಂದು ದೊಡ್ಡ ಮಚ್ಚು. ಅದಕ್ಕೇ ಸುಣ್ಣದ ಪಟ್ಟೆ, ಅರಶಿನ ಕುಂಕುಮ ಏರಿಸಿದ್ದಾರೆ. ತುದಿಗೆ ಒಂದು ಲಿಂಬೇ ಹಣ್ಣನ್ನು ಚುಚ್ಚಲಾಗಿದೆ‌. ಅವಳ ಆ ರೌದ್ರ ಮುಖವ ನೋಡಿದ ನಮಗೆ ಗಾಬರಿಯಿಂದ ಹೃದಯ ಬಡಿತ ನಿತ್ತೇ ಹೋಗಿದೆ. ಅತ್ತಿತ್ತ ನೋಡಿದೆ, ಕುರಿ, ಕೋಳಿ, ಕೋಣ ಯಾವುದೂ ಇಲ್ಲ. ಅಂದರೇ, ಅವಳು ಬರುತ್ತಿರುವುದು ನಮ್ಮ ಬಳಿಗೇ. ಓಡೋಣವೆಂದರೇ ಅದೇನು ಮಂಕೋ ಯೇನೋ ಕೈ‌ಕಾಲುಗಳಿಗೆ ಬಲಹೀನತೆ. ಕಾಲನ್ನು ಎತ್ತಲೂ ಆಗುತ್ತಿಲ್ಲ. ಭಯದಲ್ಲಿ ಕಣ್ಣು ಮುಚ್ಚಿದ್ದೊಂದೇ ಗೊತ್ತು. ಮೈ ಮತ್ತು ಮುಖಕ್ಕೆ ರಕ್ತದ ಹನಿಗಳು ಹಾರಿದವು. ಒಮ್ಮೆಲೆ ಎದೆ ಝಲ್ ಎಂದಿತು.

  ಓಹ್ ನಮ್ಮಲ್ಲೇ ಒಬ್ಬರು ಬಲಿಯಾಗಿದ್ದಾರೆ, ನನ್ನ ಊಹೆ. ನಿಧಾನವಾಗಿ ಮುಖದಮೇಲೆ ಕೈಯಾಡಿಸಿದೆ, ನಿಧಾನವಾಗಿ ಕಣ್ಣು ತೆಗೆದೆ, ಕೈಗೆ ಹಿಡಿದ ರಕ್ತ ನೋಡಲೂ ಭಯ. ಆದರೂ ಕೈ ಕಡೆಗೆ ನೋಡಿದೆ. ಅರೆರೆ, ಕೈನಲ್ಲಿ ರಕ್ತದ ಖಲೆಯಿಲ್ಲ. ಮತ್ತೆ ಎರಡೆರಡು ಬಾರಿ ಮುಖ ಒರೆಸಿದೆ. ಊಹುಂ, ಇಲ್ಲ. ಅಕ್ಕಪಕ್ಕ ನೋಡಿದೆ. ಎಲ್ಲರ ಮುಖದಲ್ಲೂ ಅದೇ ಭಯ. ಮುಖ ಮುಖ ನೋಡಿಕೊಳ್ಳುವಾಗಲೇ, ಹೃದಯ ರೈಲಿನ‌ ಎಂಜಿನು, ಚುಕುಬುಕು ಎಂದಂತೆ, ಐವರ ಹೃದಯ ಬಡಿತವೂ, ಐವರಿಗೂ ಕೇಳುವಷ್ಟು ಜೋರಾಗಿ ಬಡಿಯುತಿದೆ. ಎಲ್ಲರೂ ಇದ್ದೇವೆ. ಆದ್ರೇ ಆ ಮಾಟಗಾತಿ, ಆ ಮುದುಕ ಹಾಗೇ ದೇಗುಲವೂ ಇಲ್ಲ. ಕಣ್ಣನ್ನು ಉಜ್ಜಿಕೊಂಡೆ, ಓಹ್ ನಾವು ಕಾರಿನೊಳಕ್ಕೇ ಇದ್ದೇವೆ. ಆದರೇ ಎಲ್ಲರಲ್ಲೂ ಅದೇ ಗಾಬರಿ.  ಹಾಗಾದರೇ, ರಕ್ತ ಹಾರಿದ್ದು ಹೇಗೆ? ಮುಖವನ್ನು ಮತ್ತೆ ಒರೆಸಿಕೊಂಡೆ. ಸೂಕ್ಷ್ಮವಾಗಿ ಗಮನಿಸಿದೆ. ಮತ್ತೆ ಮುಖಕ್ಕೆ ನೀರ ಹನಿಗಳು ಎರಚಿತು. ಓಹ್, ಹೊರಗೆ ಮಳೆ ಶುರುವಾಗಿದೆ. ಗಾಡಿಯೊಳಗೆ, ಗಾಳಿಯಾಡಲಿ ಎಂದು ಕಿಟಕಿಗಾಜನ್ನು ಪೂರ್ಣವಾಗಿ‌ ಮುಚ್ಚಿಲ್ಲ, ಅದಕ್ಕೇ ನೀರು ಮುಖಕ್ಕೆ ಹಾರಿದೆ. 

  "ಹಾಗಾದರೇ, ನಮಗೆ ಬಿದ್ದಿದ್ದು ಕನಸಾ?" ನಾನು ಕೇಳಿದೆ.

  "ಹಾಗಾದರೇ, ನಮಗೂ ಬಿದ್ದಿದ್ದು ಕನಸಾ?" ಅವರಲ್ಲ ಒಟ್ಟಿಗೇ ಕೇಳಿದರು. 

  "ಅರೆ, ನಿಮಗೇನು ಕನಸು ಬಿತ್ತು?" ನಾನಂದೆ.
  ಐವರಿಗೂ ಒಂದೇ ಕನಸು ಬಿದ್ದಿದೆ...!!!

  ಅಲ್ಲಾ ಸ್ವಾಮಿ ಕನಸು ಎಂದು ಸಮಾಧಾನ ಪಡಲೋ, ಇಲ್ಲಾ ಎಲ್ಲರಿಗೂ ಒಂದೇ‌ ಕನಸು ಬಿದ್ದಿದೆಯಲ್ಲಾ ಎಂದು ಭಯ ಪಡುವುದೋ? ನೀವೇ ಹೇಳಿ.

  ಸುತ್ತಮುತ್ತ ನೋಡಿದೆವು. ಬರ್ತಾ ಇದ್ದ ಮಳೆ ಹಾಗೇ ಕಮ್ಮಿಯಾಯ್ತು. ಮತ್ತದೇ ತಂಗಾಳಿ ಬೀಸತೊಡಗಿತು. ಮರದ ಎಲೆಗಳಿಂದ ಬೀಳುತ್ತಿರುವ ಹನಿಗಳ ಸದ್ದು. ವಿಮರ್ಶೆ ಮಾಡಲು ಪ್ರಾರಂಭಿಸಿದೆ. ವಾಚನ್ನ ನೋಡಿದೆ, ಸರಿಯಾಗಿ 12 ಘಂಟೆ ಮೂವತ್ತು ನಿಮಿಷ. ಹಾಗಾದರೇ, ನಾವು ಅವಾಗಲೇ ಮಲಗಿದ್ದೇವೆ. ಓಕೆ, ಅದ್ಯಾವ ಜೀಪು? ಜೀಪಿನ ಕಥೆ ಬಿಡಿ. ತಲೆಬುರುಡೆ, ಮೊಣಕೈ ಮೂಳೆಯನ್ನ ಇನ್ನೂ ನನಗೆ ಮರೆಯಲಾಗ್ತಾ ಇಲ್ಲ. ಥೋ... ಎಂದು ಕಾಲನ್ನು ಮೇಲೇತ್ತಿದೆ. ನಮ್ಮ ಕಾರಿನಲ್ಲೂ ಅದೇ ಶಬ್ಧ. ಏನದು ಎಂದು ಕೆಳಗೆ ನೋಡಿದೆ. ಓಹ್, ನೀರಿನ ಬಾಟಲಿ. ಅದ್ಯಾವಾಗ ನನ್ನ ಕಾಲಡಿಗೆ ಬಂದಿದೆಯೋ. ನಾನು ಕಾಲು ಅಲುಗಾಡಿಸಿದಾಗೆಲ್ಲಾ ಸದ್ದು ಮಾಡಿದೆ. ಸರಿ ಹಾಗಾದರೇ, ಆ ಮೊಣಕೈ ಮೂಳೆ? ಪಕ್ಕಕ್ಕೆ ನೋಡಿದೆ. ಮುಂದುಗಡೆ ಸೀಟಿನಲ್ಲಿ ಕೂತಿದ್ದರಿಂದ ಆ ಹ್ಯಾಂಡ್ ಬ್ರೇಕೋ ಅಥವಾ ಗೇರ್ ಲಿವರೋ, ಯಾವುದನ್ನೋ ಮುಟ್ಟಿ ನಿದ್ದೆಯ ಮಂಪರಿನಲ್ಲಿ ಹಾಗೆ ಅನ್ನಿಸಿದೆ. ಸೋ ನಾನು ಕಂಡದ್ದೆಲ್ಲವೂ ಕನಸು. 

  ಆದರೇ, ಎಲ್ಲರಿಗೂ ಒಮ್ಮೆಲೆ, ಒಂದೇ ತರಹದ ಕನಸು ಹೇಗೆ? ಮತ್ತದೇ ಭಯ. ಎಲ್ಲರ ಮುಖ ಬೆವರುತ್ತಿದೆ. ಮತ್ತದೇ ನಿಷ್ಯಬ್ಧ. ಏನು ಮಾಡೋಣವೆಂದು ಯೋಚಿಸುತ್ತಿರುವ ಹೊತ್ತಿಗೆ, ಆ ಶಾಂತ ವಾತಾವರಣವನ್ನು ಕದಡುವಂತೆ, ಒಂದು ಜೀಪಿನ‌ ಸದ್ದು. ಹಕ್ಕಿ, ಬಾವಲಿಗಳು ಕೆಳಗಿನ ದಾರಿಯಿಂದ ಹಾರಿ ಹೋಗಿದ್ದು ಕಾಣಿಸಿತು. ಓಹ್, ಯಾವುದೋ ಜೀಪು ಬರ್ತಾ ಇದೆ‌. ಆ ಕಡಿದಾದ ತಿರುವಿನಲಿ ಬರಿಯ ಹೆಡ್ಲೈಟ್ ನ ಸಣ್ಣ ಬೆಳಕು ಕಾಣ್ತಾ ಇದೆ. ನಮಗೋ ಮತ್ತೆ ಕೈಕಾಲು ನಡಗಲು ಶುರುವಾಯ್ತು. ಮತ್ತದೇ ಆತಂಕ, ಮುಖ ಮುಖ ನೋಡಿಕೊಂಡೆವು. ದೂರದಲ್ಲಿದ್ದ ಜೀಪಿನ ಸದ್ದು ಹತ್ತಿರಾಗ್ತಾ ಇದೆ‌‌. ಹಿಂದಿನ ಸೀಟಿನಲ್ಲಿದ್ದ ಸೂರಜ್ ಮತ್ತೇ ಮನ್ಮಥ್ ಹಾಗೇ ಕಿರಣ್ ಅಲ್ಲಿಂದಲೇ, ಸಿದ್ದಾಂತ್ ಗೆ "ಮಗಾ,.. ಗಾಡಿ ಸ್ಟಾರ್ಟ್ ಮಾಡು, ಬೇಗಾ ಬೇಗಾ ..." ಎಂದಿದ್ದು ನನಗೆ ಕೇಳ್ತಾ ಇದೆ. ಆದ್ರೇ ನನ್ನ ಗಮನ ಮಾತ್ರಾ ಮುಂದೆ ಎದುರಾಗುವ ದೃಷ್ಯಗಳ ಬಗ್ಗೆ.

  ದೂರದಲ್ಲಿದ್ದ ಜೀಪು ನಮ್ಮ ಎದುರುಗಿನ ತಿರುವಿನಲ್ಲಿ ತಿರುಗಿ ನಮ್ಮ ಕಡೆಗೇ ಬರ್ತಾ ಇದೆ. ಜೀಪಿನ ಹೆಡ್ಲೈಟ್ ಬೆಳಕು ಕಾರೊಳಗಿದ್ದ ನಮ್ಮ ಕಣ್ಣಿಗೆ ಬಿದ್ದು ಕಣ್ಣು ಬಿಡದಂತಾಯ್ತು. ಅದೇ 1997-98 ರ ಮಾಡೆಲ್ ನ, ಹಸಿರು ಬಣ್ಣದ ಮಿಲಿಟರಿ ಜೀಪು. ಅದೇ ಸಮಯಕ್ಕೆ ಆ ದೇವರ ಅನುಕಂಪವೋ ಯೇನೋ, ಸಿದ್ದಾಂತ್ ನ‌ ಪ್ರಯತ್ನಕ್ಕೆ ಮಣಿದು, ನಮ್ಮ ಕಾರೂ ಸ್ಟಾರ್ಟ್ ಆಗಿತ್ತು. ಪಟ್ಟ ಕ್ಲಚ್ ಹಿಡಿದು, ಗೇರ್ ಹಾಕಿ, ಹ್ಯಾಂಡ್ ಬ್ರೇಕ್ ರಿಲೀಸ್ ಮಾಡಿ, ಕಾರನ್ನ ಹೊರಡಿಸಿಯೇ ಬಿಟ್ಟ. ಅಷ್ಟೊತ್ತಿಗಾಗಲೇ ಜೀಪು ನಮ್ಮ ಸಮೀಪಕ್ಕೆ ಬಂದಾಗಿತ್ತು. ನಮ್ಮ ಕಾರಿನ ಹೆಡ್ಲೈಟ್ ಬೆಳಕಿಗೆ, ಆ ಜೀಪಿನ ಬಾಗಿಲಲ್ಲಿ ಕೂತಿದ್ದ ಆ ಮುದುಕನ ಮುಖ ದರ್ಶನವಾಯ್ತು. ಅದೇ ಕರಿಯ ಮುಖ, ಬಿಳಿಯ ಗಡ್ಡ ಮೀಸೆ, ಊನವಾದ ಬಲಗೈ, ನೋಡಿದೊಡನೆ ನಮ್ಮ ಝಂಗಾಭಲ ಉಡುಗಿಹೋಯ್ತು.

  ಅಷ್ಟೊತ್ತಿಗೇ, ಜೀಪಿನ ಒಳಗಿನ ಲೈಟು ಆನ್ ಆಗಿದ್ದೇ ತಡ, ಅದೇ ಹೆಂಗಸು. ಕೆಂಪು ಕುಂಕುಮ, ಹುಬ್ಬು ಗಂಟಿಕ್ಕಿದ ಮುಖ. ಕಪ್ಪು ಬಟ್ಟೆ. ಎಲ್ಲರೂ ಒಮ್ಮೆಲೇ ಸಿದ್ದಾಂತ್ ಹೊರಡೂ, ಹೊರಡೂ ಎಂದೆವು. ಪುಣ್ಯಕ್ಕೆ ಜೀಪು ಅಲ್ಲಿ ನಿಲ್ಲಲಿಲ್ಲ, ಮುಂದೆ ಸಾಗಿತು. ಆದರೇ, ಆ ಮುದುಕನ ನೋಟ ನಮ್ಮೆಡೆಗೇ ನೆಟ್ಟಿತ್ತು. ನಾವೂ ನಿಲ್ಲಲಿಲ್ಲ. ಸಿಕ್ಕ ದಾರಿಯಲ್ಲಿ ಗಾಡಿ ಓಡಿಸಿದ್ವೀ. 20 ರಿಂದ 30 ಕಿಲೋಮೀಟರ್ ಹೋದಮೇಲೆ ಒಂದು ಟೀ ಅಂಗಡಿ‌ ಎದುರಾಯ್ತು. ಅಲ್ಲಿ ಕೇಳಲೂ ಭಯ. ಆದರೂ ಧೈರ್ಯ ಮಾಡಿ,

  "ಅಣ್ಣಾ, ಬೆಂಗಳೂರಿಗೆ ಹೇಗೆ?" ಎಂದೆ.

  ಅವನು ಒಮ್ಮೆಲೆ ನಮ್ಮ ಕಾರಿನ ಕಡೆಗೆ ಕಣ್ಣಾಡಿಸಿ "ಹೀಗೆ ಹೋಗಿ, ಒಂದಿಪ್ಪತ್ತು ಕಿಲೋಮೀಟರ್ ಹೋದ್ಮೇಲೆ ಶಿರಾಡಿ ಘಾಟಿ ಸಿಗ್ತದೆ. ಅದೇ ಹೈವೇ" ಎಂದ.

  ಹಾಗಾದ್ರೇ ನಾವು ಇಷ್ಟೊತ್ತೂ ಇದ್ದಿದ್ದೂ 'ಗುಂಡ್ಯಾ' ಅರಣ್ಯದಲ್ಲಾ? ಭಯವಾದರೂ, ಯಪ್ಪಾ ತಪ್ಪಿಸಿಕೊಂಡು ಬಂದೆವಲ್ಲಾ ಎಂದು, "ಹೋಗಪ್ಪಾ ಸಿದ್ದಾಂತ್ ಇದೇ ರೋಡಂತೆ, ಬೇಗ ಬೆಂಗ್ಳೂರ್ ಸೇರ್ಕೊಳಣಾ" ಎಂದೆ.

  ಹೈವೇ ಸೇರುವಾಗಲೇ ಬೆಳಗಿನ ಜಾವ 3:30 ಆಗಿತ್ತು. ಮತ್ತೇ ಮಲಗಿ ಎದ್ದು ಹೋಗುವ ಧೈರ್ಯ ಯಾವೊಬ್ಬರಿಗೂ ಇರಲಿಲ್ಲ. ನಿದ್ರಯ ಮಂಪರೂ ಬಾರಲಿಲ್ಲ. ಹೈವೇಯಲ್ಲಿ ಕಾರು, ಬಸ್ಸು, ಬೈಕುಗಳ ಓಡಾಟ ಇದ್ದದ್ದರಿಂದ ಅಲ್ಲಿಂದ ನೇರವಾಗಿ ಬೆಂದಕಾಳೂರು ಪಟ್ಟಣ ಸೇರುವಾಗ ಬೆಳಿಗ್ಗೆ 10:00.

  ಕೊನೆಗೂ ಮೂರು ದಿನದ ಪ್ರಯಾಣವನ್ನ, ಒಂದು ದಿನಕ್ಕೆ ಮೊಟಕುಗೊಳಿಸಿ, ಇನ್ನೆರಡು ದಿನಗಳನ್ನ ಜ್ವರದಲ್ಲಿ ಕಳೆಯಬೇಕಾಗಿ ಬಂತು. ಆದರೂ ಆ ಮಾಟಗಾತಿಯ ಜೀಪು ಮರೆಯಲಾರದ ನೆನಪಾಗಿ ಉಳಿಯಿತು.

(ಮುಗಿಯಿತು)
(ವಿ. ಸೂ. : ಈ ಕಥೆ ಕೇವಲ ಕಾಲ್ಪನಿಕ ಮತ್ತು ಇದು ಯಾವುದೇ ವ್ಯಕ್ತಿಯ ಇಲ್ಲವೇ ಯಾವುದೇ ನಿಜ ಜೀವನಕ್ಕೆ ಸಂಬಂಧಿಸಿದ್ದಲ್ಲ.)
- ಕೆ. ಸಿ. ಪಿ. ಕಾರಂತ್
ಕಮ್ಮರಡಿ
29/11/2019      11:22 PM

Comments

  1. Prayathna chennagide, aadre allalli kathe regular patterns na hidkolatte, munde idara mele swalpa jasti hottu kotre inna jasti interesting aag iratte annodu nanna anisike.

    ReplyDelete

Post a Comment

Popular posts from this blog

ನಾ ಕಂಡಂತೆ ನನ್ನೂರು

ಹಾಸ್ಟೆಲ್ ಕಥೆಗಳು - ೧

"ತ್ಯಾಗಿ" ಭಾಗ - 4 "ಜಿಮ್ಮಿ"