ನಾ ಕಂಡಂತೆ ನನ್ನೂರು ಭಾಗ - 4

"ದೀಪೋಳ್ಗೇ... ದೀಪ್ ದೀಪೋಳ್ಗೇ..."


" ಸೂವಿರೋ ಸಂಗಯ್ಯಾ, ಸೂವೀರೋ ಲಿಂಗಯ್ಯಾ...
ಸೋಬಾಂದಲಿ ಬಾರೋ ಬಸವಯ್ಯಾ...
ದೀಪೋಳೀಗೇನ್ನೀರೋ.. ನಮ್ಮೂರ ದ್ಯಾವ್ರಿಗೇ ...
ನಮ್ಮೂರಾ ದ್ಯಾವ್ರಿಗೇ, ಏನೇನೂ ಪೂಜಾವೋ...
ಏನೇನೂ ಪೂಜಾವೋ, ಹಾಲಣ್ಣು ಪೂಜಾವೋ...
ದೀಪೋಳೀಗೇನ್ನೀರೋ.. ನಮ್ಮೂರ ದ್ಯಾವ್ರಿಗೇ ... "

   ಅರೆ ಏನಪ್ಪಾ ಇದು ಅನ್ಕೊಂಡ್ರಾ? ನಮ್ ಮಲ್ನಾಡ್ ಭಾಗದೋರಿಗೆ ಇದೇನ್ ವಿಶೇಷ ಅಲ್ಲ ಬಿಡಿ. ಕಾರಣ, ಈ ದೀಪಾವಳಿ ಬಂತು ಅಂದ್ರೇ ಅಂಟಿಕೆ ಪಂಟಿಕೆ ಸದ್ದು ರಾತ್ರಿಯೆಲ್ಲಾ ಕೇಳೋದೇ. ಇದು ನಮ್ಮ ಮಲೆನಾಡಿನ ಪದ್ದತಿ. ದೀಪಾವಳಿ ಸಮಯದಲ್ಲಿ ಊರಿನ ಮುಖ್ಯ ದೇವರಿಗೆ‌ ಅಂದ್ರೇ ಗ್ರಾಮ ದೇವರ ದೇವಾಲಯದಲ್ಲಿ ಅಂಟಿಕೆ ಪಂಟಿಕೆ ತಂಡ ಕಟ್ಟುವ ಕೆಲಸ ನೆಡೆಯತ್ತೆ.

   ಹಾಗಾದ್ರೇ ಈ ಅಂಟಿಕೆ ಪಂಟಿಕೆ ಅಂದ್ರೇ‌ ಏನು ? ಏನ್ ಮಾಡ್ತಾರೆ ಅಂತ ಯೋಚ್ನೇ ಮಾಡ್ತಾ ಇದಿರಾ?? ಇದು ನಮ್ಮ ಮಲೆನಾಡು, ಅದ್ರಲ್ಲೂ ತೀರ್ಥಹಳ್ಳಿ, ಕೊಪ್ಪಾ ಮತ್ತೇ ಶ್ರಿಂಗೇರಿ ಭಾಗಗಳಲ್ಲಿ ನೆಲೆ ನಿಂತರುವ ಒಂದು ಜಾನಪದ ಕಲೆ. ದೀಪಾವಳಿಯ ಮೊದಲ ದಿನದಿಂದ ಪ್ರಾರಂಭವಾಗಿ, ಹಬ್ಬದ ಮೂರೂ ದಿನ ರಾತ್ರಿ ಪೂರ್ತಿ ಊರಿನ ಯುವ ಸಮುದಾಯ ಈ ಅಂಟಿಕೆ ಪಂಟಿಕೆ ಯಲ್ಲಿ ಮಗ್ನವಾಗಿರತ್ತೆ. ಹಬ್ನದ ಮೊದಲ ದಿನ, ಗ್ರಾಮದೇವರ ದೇಗುಲದಲ್ಲಿ ವಿಶೇಷ ಪೂಜೆ ಮಾಡಿ, ಜ್ಯೋತಿ ಹಿಡಿದು ಹಾಡು ಶುರು ಮಾಡಿದ್ರೇ, ನಿಲ್ಲೋದು ಮಾರನೇ ದಿನ ಬೆಳಿಗ್ಗೇನೇ. ಒಬ್ರು ನಿಲ್ಸಿದ್ ತಕ್ಷಣ ಇನ್ನೋಬ್ರು, ಇನ್ನೊಬ್ರು ನಿಲ್ಸಿದ್ ತಕ್ಷಣ ಮತ್ತೊಬ್ರು ಹೀಗೆ ರಾತ್ರಿ ಪೂರ್ತಿ ಹಾಡು ಹೇಳುತ್ತಾ ಊರೆಲ್ಲಾ ಸುತ್ತಾಡುವುದು ಪ್ರತೀತಿ.

( ಅಂಟಿಕೆ ಪಂಟಿಕೆಯ ಒಂದು ಝಲಕ್ )

   ಹಚ್ಚಿಕೊಂಡ ಜ್ಯೋತಿಯನ್ನ ಹಿಡಿದು, ಊರಿನ ಪ್ರತಿಮನೆಗೂ ಹೋಗಿ, ಹಾಡನ್ನು ಹೇಳಿ ಹರಸುವುದು. ಆ ಅಂಟಿಕೆ ಪಂಟಿಕೆ ತಂಡ ಮನೆಯೆದುರು ಬಂದೊಡನೆ, ಮನೆಯ ಯಜಮಾನರು ಬಂದು ಅವರನ್ನೆಲ್ಲಾ ಬರಮಾಡಿಕೊಳ್ಳುವುದು. ಮನೆಯೊಡತಿ ಬಂದು ಆ ಜ್ಯೋತಿಗೆ ಎಣ್ಣೆಯನ್ನು ಎರೆದು, ಮನೆಯ ಇನ್ನೊಂದು ಹಣತೆಯನ್ನು ಆ ಜ್ಯೋತಿಯಿಂದ ಹೊತ್ತಿಸಿ ಕೊಂಡು, ಭತ್ತ, ಅಡಕೆ ಹಾಗೂ ಕಾಣಿಕೆಯನ್ನು ದೇವಸ್ಥಾನಕ್ಕೆ ಸಮರ್ಪಿಸುವುದು ನೆಡೆದುಕೊಂಡು ಬಂದಿರುವ ಪದ್ದತಿ. ಈ ಅಷ್ಟೂ ಚಿತ್ರಣವನ್ನೂ ಅಂಟಿಕೆ ಪಂಟಿಕೆ ಹಾಡಿನಲ್ಲಿ ಎಷ್ಟು ಸುಂದರವಾಗಿ ಚಿತ್ರಿಸಿದ್ದಾರೆ ನೋಡಿ.

"ಬಾಗೀಲಾ ಮುಂದೆ ಬಲಗೊತ್ತಿ ನಿಂತವರೆ
ಬಾಗ್ಯೋಳಾರು, ಬಂದು ಕರಕೋಳಿ...
ಬಾಗ್ಯೋಳಾರು, ಬಂದು ಕರಕೋಳಿ ಈ ಜ್ಯೋತಿ,
ಜಗಜ್ಯೋತಿನೊಳಗೆ ಕರಕೋಳಿ...
ಎಣ್ಣೇಯಾ ನೆರೆದಾರೆ, ಪುಣ್ಯಗಳೂ ನಿಮಗಾವು
ಪುಣ್ಯಾವಂತರಾಗಿ ಸುಖಬಾಳಿ...
ತುಪ್ಪಾವಾ ನೆರೆದಾರೆ, ಒಪ್ಪಗಳೂ ನಿಮಗಾವು
ಒಪ್ಪೂವಂತರಾಗಿ ಸುಖಬಾಳಿ...
ದೀಪೋಳ್ಗೇ... ದೀಪ್ ದೀಪೋಳ್ಗೆ..."


   ಎಷ್ಟು ಸುಂದರವಾಗಿ, ಪದ ಪದ ಪೋಣಿಸಿ ಈ ಅಂಟಿಕೆ ಪಂಟಿಕೆ ಕಲೆಯನ್ನ ಹುಟ್ಟುಹಾಕಿದ್ದಾರೆ ನೋಡಿ. ಹಾಗಾದರೆ, ಈ ಜಾನಪದ ಕಲೆ ಹೇಗೆ ಆಚರಣೆಗೆ ಬಂದಿದ್ದಿತು ??

   ಬಹುಶಃ, ನಿಮಗೆಲ್ಲಾ ಗೊತ್ತಿರುವಂತೆ ಈ ದೀಪಾವಳಿ ಸಮಯಕ್ಕೆ ಭತ್ತದ ಪೈರು ಕಟಾವಿಗೆ ಬಂದಿರೋದ್ರಿಂದಾ, ಇದೇ ಸಮಯಕ್ಕೆ ಕಾಯ್ತಾ ಇರೋ ಮೊಲ, ನವಿಲು, ಜಿಂಕೆ, ಕಾಡುಹಂದಿ ಹಾಗೂ ಕಾಡುಕೋಣಗಳೆಲ್ಲದರ ಕಾಟ ಸ್ವಲ್ಪ ಜಾಸ್ತಿಯೇ ಇರತ್ತೆ. ದಿನಪೂರ್ತಿ‌‌ ಮಾನವರಿಗೆ ಹೆದರಿ ಕಾಡಿನೊಳಕ್ಕೆ ಇರೋ ಇವು ರಾತ್ರಿಯಾದೊಡನೆ ತಮ್ಮ ಕಾರ್ಯಾಚರಣೆ ಪ್ರಾರಂಭ ಮಾಡಿ, ಗದ್ದೆ ತೋಟಗಳಿಗೆ ನುಗ್ಗಿ ಎಲ್ಲವನ್ನೂ ಹಾಳು ಮಾಡುತ್ತವೆ. ಇವಕ್ಕೆ ಮನುಷ್ಯರನ್ನ ಕಂಡ್ರೇ ಭಯ ಅನ್ನೋ ಒಂದೇ ಕಾರಣಕ್ಕೆ, ಆ ಕಾಲದಲ್ಲೇ ಈ ಅಂಟಿಕೆ ಪಂಟಿಕೆ ಎಂಬ ಅಭ್ಯಾಸ ತಂದು ಆ ಪ್ರಾಣಿಗಳ ಉಪಟಳದಿಂದ ತಪ್ಕೊಳೋ ಪ್ರಯತ್ನ ಇರ್ಬೊದು‌. ಜೊತೆಗೆ ಗ್ರಾಮದೇವರ ದೇಗುಲಕ್ಕೆ ದೇಣಿಗೆ ಬಂದಂತೆಯೂ ಆಯ್ತಲ್ಲಾ.



   ಆದ್ರೇ ವಿಪರ್ಯಾಸ ಏನ್ ಗೊತ್ತೇನು ? ದಾಳಿ ಮಾಡ್ಲಿಕ್ಕೆ ಪ್ರಾಣಿಗಳೇ ಇಲ್ಲ. ಅವು ಇರ್ಬೇಕು ಅನ್ನೋಕೆ ಕಾಡುಗಳನ್ನಾ ನಾವು ಉಳ್ಸಿರ್ಬೇಕಲ್ಲಾ. ಇನ್ನೊಂದ್ ಏನ್ ಗೊತ್ತೇನು ? ಭತ್ತದ ಪೈರು ಕಟಾವಿಗೆ ಬರ್ಲಿಕ್ಕೆ, ಭತ್ತ ಬೆಳೆಯೋ ರೈತರು ಎಷ್ಟಿದ್ದಾರೆ ಅನ್ನೋದೂ ಮುಖ್ಯವೇ. ಕಾರಣ ಬಹಳಷ್ಟಿದೆ, ಗದ್ದೆ ಕೆಲಸಕ್ಕೆ ಮಲ್ನಾಡಲ್ಲಿ ಜನ ಇಲ್ಲ. ಒಂದೋ ಅತೀವೃಷ್ಠಿ ಇಲ್ವಾ ಅನಾವೃಷ್ಠಿ. ಮಲ್ನಾಡಲ್ಲಿ ಈಗೀಗ ಬೇಸಿಗೆಯಲ್ಲಿ ನೀರಿಗೆ ತಾತ್ವಾರ ಅಂದ್ರೇ ನಂಬ್ತೀರಾ? ನಂಬ್ಲೇಬೇಕು. ಟ್ಯಾಂಕರ್ ಅಂದ್ರೇ ಏನು ಅಂತನೇ ಗೊತ್ತಿಲ್ದೇ ಇದ್ದ ನಾಡಲ್ಲಿ, ಬೇಸ್ಗೇಲಿ ಅದಿಲ್ದೇ ನೀರಿಲ್ಲಾ ಅನ್ನೋ ಪರಿಸ್ಥಿತಿ. ಇನ್ನೆಲ್ಲಿ ಭತ್ತದ ಗದ್ದೆ ಸ್ವಾಮಿ. ಅಲ್ಲದೇ ಭತ್ತಕ್ಕೆ ಒಳ್ಳೆ ಬೆಲೆ ಇಲ್ಲ. ಬೆಳೆಯಕ್ಕೆ 25 ರೂಪಾಯಿ ಖರ್ಚಾದ್ರೇ, ಸಿಕ್ಕೋದು ಕೆಜಿಗೆ  28 - 30 ಬೆಲೆ. 3 - 5 ರೂಪಾಯಿ ಲಾಭಕ್ಕಿನ್ನಾ ಅಡಕೆ, ಕಾಳು ಮೆಣಸು, ಏಲಕ್ಕಿ, ಕಾಫಿ ಬೆಳೆದ್ರೇ? ಇದು ಹಣದ ಹಿಂದೆ ಓಡ್ತಾ ಇರೋ ಪ್ರಪಂಚ ಸ್ವಾಮಿ. ಇಷ್ಟೆಲ್ಲಾ ಇದ್ರೂ, ಇವತ್ತಿಗೂ ಗದ್ದೆ ಮಾಡ್ತಾ ಇರೋ ಕೆಲವೇ ಕೆಲವು ರೈತರಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ. ಯಾಕಂದ್ರೇ ಹೊಟ್ಟೆಗೆ ನಾವ್ ತಿನ್ನೋದ್ ಅನ್ನನೇ ಹೊರತು, ಅಡಕೆ, ಕಾಳು ಮೆಣಸು, ಏಲಕ್ಕಿ, ವೆನಿಲ್ಲಾ ಅಲ್ವಲ್ಲಾ.

   ಬರಿಯ ಅಂಟಿಕೆ ಪಂಟಿಗೆ ಬಗ್ಗೆನೇ ಹೇಳ್ತಾ ಹೋದ್ರೇ ಅದ್ರು ತರಾನೇ ಬೆಳಿಗ್ಗೆ ಆಗೋದು ಸುಳ್ಳಲ್ಲ. ಆದ್ರೇ ದೀಪಾವಳಿ ಸಮಯದಲ್ಲಿ ಇದೊಂದೇ ಆಚರಣೆ ಅಲ್ಲ ನೋಡಿ. ನಮ್ಮ ಮಲೆನಾಡು ಅದೆಷ್ಟೋ ಆಚರಣೆಗಳನ್ನ ತನ್ನಲ್ಲಿ ಇಟ್ಕೊಂಡಿದ್ರೂ ಅದ್ರಲ್ಲಿ ಕೆಲವೇ ಕೆಲವು ಮಾತ್ರಾ ಉಳ್ಕೊಂಡಿದೆ‌. ಅದರಲ್ಲಿ ಬೂದುಗಳುವು ಕೂಡಾ ಒಂದು. ಇದೇನಂದ್ರೇ ನರಕ ಚತುರ್ದಶಿ ಹಿಂದಿನ ದಿನ ರಾತ್ರಿ‌‌ ಊರಿನ ಕೆಲವು ಹುಡುಗರು ಸುಮ್ಮನೇ ಕಿತಾಪತಿ ಮಾಡಲೆಂದು ಕೆಲವು ವಸ್ತುಗಳನ್ನ ಕದಿಯೋದು, ಇಲ್ಲವೇ ಅದನ್ನ ಬೇರಲ್ಲೋ ಬಚ್ಚಿಡದು. ಹೀಗೆ ಅದರಲ್ಲೇ ಒಂದು ಮಜ. ತೋಟದಲ್ಲಿ ಬಾಳೇ ಗೊನೆ ಇದ್ರೇ ಅದನ್ನ ಕದಿಯೋದು. ತರಕಾರಿ ತೋಟದಲ್ಲಿ ಇರೋ ತರಕಾರಿ ಕದಿಯೋದು . ಕೊನೆಗೆ ಮಾರನೇ ದಿನ ಆ ಕಳೆದು ಹೋದ ವಸ್ತು ಹುಡ್ಕೊ ಕೆಲಸ ಮತ್ತೆ ಆ ಮನೆಯ ಹುಡುಗರ ಮೇಲೆ ಬೀಳ್ತಿತ್ತು. ಒಟ್ನಲ್ಲಿ ಆ ಒಂದು ದಿನ‌ ಮಾತ್ರಾ ಕಳ್ಳತನ ಲೀಗಲ್.

   ದೀಪಾವಳಿಯ ಮೊದಲ ದಿನ ಬೇರೆ ಎಲ್ಲಾ ಕಡೆಯೂ ಬರಿಯ ನರಕ ಚತುರ್ದಶಿಯ ಅಭ್ಯಂಜನ ಸ್ನಾನವಷ್ಟೇ ವಿಶೇಷವಾದ್ರೇ, ನಮ್ಮ ಮಲೆನಾಡಲ್ಲಿ ಹಿಂದಿನ ದಿನದ ನೀರು ತುಂಬುವ ಹಬ್ನವೂ ಅಷ್ಟೇ ವಿಶೇಷ. ಅಂದು ಸಾಮಾನ್ಯವಾಗಿ ಮನೆಯಲ್ಲಿ ಪ್ರತಿದಿನ ಸ್ನಾನದ ನೀರು ಕಾಯಿಸುವ ಹಂಡೆ ಹಾಗೂ ಒಲೆಗೆ ದೇವರ ಮರ್ಯಾದೆ. ಅವತ್ತು ಹಂಡೆಯನ್ನೆಲ್ಲಾ ತೊಳೆದು, ಒಲೆಗೆ ಸಗಣಿ ಸಾರಿಸಿ, ಸುಣ್ಣ ಬಣ್ಣ ಗಳಿಂದ ಹಂಡುಂಡ್ ಮಾಡಿ, ಹಂಡೆಯ ಕೊರಳಿಗೆ ಹಿಂಡ್ಳಕಾಯಿ ಬಳ್ಳಿಸುತ್ತಿ, ಸಿಂಗಾರ ಮಾಡುವುದೇ ವಿಶೇಷ. ಯಪ್ಪಾ ಆ ಮಡಾಗಲದ ಬಳ್ಳಿ ಸಿಕ್ದೇ ಇದ್ರೇ ಮನೇಲಿರೊ ಮಾಣಿನ ಹುಡ್ಕಕ್ಕೆ ಓಡ್ಸದು. ಯಾಕ್ ಕೇಳ್ತೀರಿ ನಮ್ ಕಷ್ಟಾನಾ?

   ಇನ್ನು ನರಕ ಚತುರ್ದಶಿ ದಿನ ಬೆಳ್ಳಂಬೆಳಿಗ್ಗೆಯೇ ಎದ್ದು, ತಲೆಗೆ ಎಣ್ಣೆಹಾಕಿ, ಮೈಗೆಲ್ಲಾ ಎಣ್ಣೆ ಸವರಿ, ಅಭ್ಯಂಜನಕ್ಕೆ ತಯಾರಾಗೋದು. ವರ್ಷಪೂರ್ತಿ ಹೊಟ್ಟೆಗೆ ಎಣ್ಣೆ ಕಾಣಿಸಿದ್ದ ಅದೆಷ್ಟೋ ಮಂದಿ ಇವತ್ತು ತಲೆ, ಮೈ, ಕೈಗಳನ್ನೆಲ್ಲಾ ಎಣ್ಣೆಯೊಳಗೆ ಮುಳುಗಿಸಿ ಏಳಿಸಿರ್ತಾರೆ. ಉರಿ ಉರಿ‌ ಬೆಂಕಿಯಲಿ ಕಾಯಿಸಿದ ಬಿಸಿ ಬಿಸಿ ಹಂಡೆಯ ನೀರಿನಲ್ಲಿ, ಸೀಗೇ ಪುಡಿ, ದಾಸವಾಳದ ಗುಳ ಹಾಕಿ ಅಭ್ಯಂಜನ ಮುಗಿಸಿ ಹೊರಗೆ ಬರುವಾಗ, ನೀರೊಲೆಯ ಬೆಂಕಿಯಿಂದ ಬಂದಷ್ಟೇ ಹೊಗೆ ನಮ್ಮ ದೇಹದಿಂದಲೂ ಬರುತ್ತಿರುತ್ತದೆಯಷ್ಟೇ. ತದನಂತರ ಬಲೀಂದ್ರ ಪೂಜೆ.


   ಇವೆಲ್ಲ ಮೊದಲ ದಿನದ ಕಥಾನಕವಾದರೇ, ಎರಡನೇ ದಿನ ಲಕ್ಷ್ಮೀ ಪೂಜೆ. ಸಾಮಾನ್ಯವಾಗಿ ಅದೇ ದಿನ ಅಂಗಡಿ ಪೂಜೆಯನ್ನೂ ಮಾಡುವವರಿದ್ದಾರೆ. ಇದರ ಬಗ್ಗೆ ನಾನು ಅಷ್ಟೊಂದು ಹೇಳಬೇಕಾದ್ದಿಲ್ಲ ಬಿಡಿ.

   ಇನ್ನು ಮೂರನೇ ದಿನಕ್ಕೆ ಬರೊಣ, ಗೋಪೂಜೆ. "ಬಲ್ಲವನೇ ಬಲ್ಲ ಬೆಲ್ಲದ ರುಚಿಯಾ" ಅಂತಾರಲ್ಲಾ ಹಾಗೆ ಗೊತ್ತಿರೋರ್ ಗೇ ಗೊತ್ತು ಗೋಪೂಜೆಯ ಮಜ. ವರ್ಷಪೂರ್ತಿ ನಮಗೆ ಹಾಲುಕೊಡುವ, ಗದ್ದೆ ತೋಟಗಳಲ್ಲಿ ರೈತರಿಗೆ ಹೆಗಲಾಗುವ, ದನ ಮತ್ತೆ ಎತ್ತುಗಳಿಗೂ ಸ್ನಾನ ಮಾಡಿಸಿ, ಮೈಗೆಲ್ಲಾ ಹಂಡುಂಡು ಮಾಡಿ, ಕುತ್ತಿಗೆಗೆ ಉಗಣೇಕಾಯಿಯ ಹಾರವನ್ನು ಕಟ್ಟಿ, ಅಲಂಕಾರ ಮಾಡುವುದೇ ಒಂದು ಗದ್ದಲದ ವಿಷಯ. ಜೊತೆಗೊಂದು ಕರು ಇದ್ದರಂತೂ ಅದರ ತುಂಟಾಟಕ್ಕೆ ಮನಸೋಲದ ಮನುಜನೇ ಇಲ್ಲ. ಎಲ್ಲ ತಯಾರಾಗಿ‌ ಇನ್ನೇನು ಪೂಜೆ ಮಾಡಲು ಶುರು ಮಾಡಬೇಕು ಅನ್ನುವಷ್ಟರಲ್ಲಿ, ಅವುಗಳಿಗೆ ಕುತ್ತಿಗೆಗೆ ಕಟ್ಟಿದ್ದ ಹೂವಿನ ಹಾರವೆಲ್ಲಾ ಅವುಗಳ ಹೊಟ್ಟೆಯಲ್ಲಿ. ಆ ಗೋಪೂಜೆ ಮಜಾನೇ ಬೇರೆ.

   ಇಷ್ಟೆಲ್ಲಾ ಆದಮೇಲೆ ಅವತ್ತು ಸಂಜೆ ಮನೆಯ ಎಲ್ಲಾ ಕಡೆಗಳಲ್ಲೂ ಹಣತೆಗಳನ್ನು ಇಡುವುದು ಮಾಮೂಲಿ. ಆದರೇ ಇಲ್ಲೂ ಮಲೆನಾಡಲ್ಲಿ ಒಂದು ಬಿಶೇಷ ಆಚರಣೆ ಇದೆ. ಅದೇನು ಅಂತೀರಾ? ಉದ್ದುದ್ದ ಅಡಕೆ ದಬ್ಬೆ ಗಳನ್ನು ಮಾಡಿ, ಅದರ ಒಂದು ತುದಿಗೆ ಎಣ್ಣೆಯಲ್ಲಿ ನೆಡೆಸಿದ ಹತ್ತಿ ಬಟ್ಟೆಯನ್ನು ಕಟ್ಟಿ ದೊಂದಿಗಳನ್ನು ಮಾಡಿಕೊಳ್ಳುತ್ತಾರೆ. ನಂತರ ಮನೆಯ ಯುವಕರು ಅವನ್ನು ತಗೊಂಡು ಅವರವರ ತೋಟ, ಗದ್ದೆಗಳ ಅಂಚುಗಳಿಗೆ ಹೋಗಿ, ದೊಂದಿಯನ್ನು ಹಚ್ಚಿ, ನೆಲಕ್ಕೆ ಚುಚ್ಚಿ ,

"ಬಲಿನ್ ಕುಟ್ರೋ, ಬಲಿನ್ ಕುಟ್ರೋ,
ಬಲೀಂದ್ರ ದೇವರಿಗ್ ಒಂದ್ಕಾಯಿ ಕುಟ್ರೋ...
ಬಲೀಂದ್ರ ದೇವರು ತನ್ ರಾಜ್ಯಕ್ ತಾವೇ ಹೋದ್ರು ... ಕೂ.... "

ಅಂತ ಕೂಗಿದ್ರೇ, ಇನ್ ಕೆಲೋರು,

"ದೀಪೋಳ್ಗೆ ದೀಪ್ ದೀಪೋಳ್ಗೆ,
ಹಂಡೋಳ್, ಹಿಂಡೋಳ್
ಲಕ್ಷ್ಮೀ ಕೋಲ್ ದೀಪೋಳ್ಗೆ..
ಬಲೀಂದ್ರ ರಾಜ,ಮೂರು ಮುಕ್ಕಾಲ್ ಘಳಿಗೆ ಬಂದ್ 
ರಾಜ್ಯ ಆಳ್ಕೊಂಡ್ ಹೋದ... ಕೂ...."


   ಅಂತ ಮನೆಯ ಹುಡುಗರೆಲ್ಲಾ ಕೂಗು ಹಾಕಿ, ತಮ್ಮ ತಮ್ಮ ಜಾಗದ  ಗಡಿ ಗುರುತು ಮಾಡಿ ಬರೋದು ರೂಢಿ. ನೀವು ಇಲ್ಲೂ ಒಂದು ವಿಶೇಷ ಕಾಣ್ಬೋದು, ಅದೇನ್ಗೊತ್ತಾ? ಇದನ್ನ ಯಾಕೆ ಮಾಡ್ತಾರೆ ಹೇಳಿ? ಮತ್ತದೇ ಪ್ರಾಣಿಗಳ ಲಾಜಿಕ್. ಪ್ರಾಣಿಗಳು ತಮ್ಮ ತಮ್ಮ ತೋಟ ಗದ್ದೆಗಳಿಗೆ ಬಾರದೇ ಇರಲಿ ಅಂತ. ಆದ್ರೇ ಇನ್ನಾ ಅದ್ಯಾವ ಪ್ರಾಣಿ ಇದೆ ಅಂತ ನನಗೆ ಗೊತ್ತಿಲ್ಲಾ.

   ಹಾ... ನಿಮ್ ಕಡೆಯೆಲ್ಲಾ ದೀಪಾವಳಿ ಎಷ್ಟ್ ದಿನ ನೆಡ್ಯತ್ತೇ? ಮೂರು ದಿನ ಅಲ್ವಾ ? ಆಮೇಲೆ ಒಂದಿನ ತುಳಸಿ ಪೂಜೆ.? ನಮ್ ಮಲ್ನಾಡಲ್ಲಿ ಕಾರ್ತಿಕ ಮಾಸ ಪೂರ್ತಿ ದೀಪಾವಳಿನೇ. ಈ ಬೆಂಗ್ಳೂರಲ್ಲಿ ಭಾದ್ರಪದ ಮಾಸ ಪೂರ್ತಿ ಗಣೇಶ ಇಡ್ತಾರಲ್ಲಾ ಹಾಗೆ. ಕಾರ್ತಿಕ ಮಾಸದ ಎಲ್ಲಾ ದಿನವೂ ಮನೆಯ ಮುಂದೆ ಹಣತೆಗಳನ್ನ ಹಚ್ಚುವುದಲ್ಲದೇ, ಸಾಮಾನ್ಯವಾಗಿ ಊರಿನ ಎಲ್ಲಾ ದೇವಾಲಯಗಳಲ್ಲೂ ಕಾರ್ತಿಕದ ದೀಪ ಆಗುತ್ತದೆ. ಅಂದರೇ, ಊರಿನ ಪ್ರತಿಯೊಬ್ಬರ ಮನೆಯವರ ಪರವಾಗಿ ಸಂಜೆ ದೇವರಿಗೆ ವಿಶೇಷ ಪೂಜೆಯಷ್ಟೇ ಅಲ್ಲ, ದೇಗುಲದ ಸುತ್ತ ದಳಿಗಳ ಮೇಲೆ ಹಚ್ಚಿದ ದೀಪಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಷ್ಟೆಲ್ಲಾ ಆದಮೇಲೆ ಪನಿವಾರ ಸೇವೆ ಕೂಡಾ ಇರುವುದು ವಿಶೇಷ.

   ನೋಡಿ ಮಲೆನಾಡು ಎಷ್ಟ್ ಚೆಂದ ಅಲಾ? ಅದ್ಕೇ ನೋಡಿ ಹೊರ ಊರುಗಳಿಂದ ಟ್ರೆಕ್ಕಿಂಗು, ಹೋಮ್ ಸ್ಟೇ, ಅಂತ ಬರೋದು. ಇಲ್ಲಿನ ವಾತಾವರಣಕ್ಕೆ ನಾಕ್ ದಿನ ಇದ್ದು ಮತ್ತದೇ ಕಾಂಕ್ರೀಟು ಕಾಡಿಗೆ ಪಯಣ ಬೆಳೆಸೋದು. ಇಲ್ಲಿನ ಮಲೆನಾಡು ಯುವಕರೂ ಕೂಡಾ ಹೀಗೆ ಆಗ್ಬಿಟ್ಟಿದ್ದಾರೆ ನೋಡಿ (ನನ್ನನ್ನೂ ಸೇರ್ಸಿ). ನಾಕ್ ದಿನ ರಜ ಸಿಕ್ತೂ ಅಂತ ಊರಿಗ್ ಬರದು, ವಾಪಾಸ್ ಮತ್ತದೇ ಬೆಂದಕಾಳೂರು.

   ಇದರ ಫಲಿತಂಶ ಏನ್ ಗೊತ್ತೇನು ? ಮಲೆನಾಡು ಈಗ ನಿಧಾನವಾಗಿ ವೃದ್ಧಾಶ್ರಮ ಆಗ್ತಾ ಇದೆ. ಕಾರಣ ಬಹಳಷ್ಟಿರಬಹುದು ಆದ್ರೇ, ಇದೇ ಕಹಿ ಸತ್ಯ. ಹಾಗಾಗಿ ಈಗೆಲ್ಲಾ ಈ ಅಂಟಿಕೆ ಪಂಟಿಕೆ ತಂಡದಲ್ಲಿ ಯುವಕರನ್ನ ಬಿಟ್ಟು 40-50 ದಾಟಿದ ಹಿರಿಯ ತಲೆಗಳೇ ಕಾಣ್ತಾ ಇದ್ದಾರೆ. ಪೇಟೆಯಲ್ಲಿ ಇರೋ ಹುಡುಗರಿಗೆ MNC ಕಂಪೆನಿಯಲ್ಲಿ ಕೆಲ್ಸ, ಹಾಗಾಗಿ ದೀಪಾವಳಿಗೆ ರಜ ಇಲ್ಲ, ಇದ್ರೂನೂ ಒಂದೋ, ಎರಡೋ ದಿನ ಅಷ್ಟೇ. ಒಂದೆರಡು ದಿನಕ್ಕಾಗಿ ಊರ್ಕಡೆ ಹೋಗೋದೂ ಕಷ್ಟನೇ. ಏನೋ ಹೋಗಣಾ ಅನ್ಕಂಡ್ರೂ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್ ಸಿಕ್ಬೇಕಲ್ಲಾ, ಸಿಕ್ಕಿದ್ರೂ ಅದಕ್ಕಾಗಿ ಅರ್ಧ ಸಂಬಳ ಮೀಸಲಿಡೋ ಪರಿಸ್ಥಿತಿ. ಮನೆಯಲ್ಲಿ ಮಕ್ಕಳಿಲ್ಲದೇ ಎಲ್ಲಿಯ ಅಭ್ಯಂಜನ? ಎಲ್ಲಿಯ ಗೋಪೂಜೆ ಸ್ವಾಮಿ? ಹಬ್ಬ ಹೆಸರಿಗಷ್ಟೇ.

   ಊರಲ್ಲಿರೋ ತಂದೆ ತಾಯಿಗಳಿಗೂ ವಯಸ್ಸಾಗಿರತ್ತೆ. ಹಬ್ಬ ಮಾಡಲು ಶಕ್ತಿ ಇಲ್ಲ. ಮಕ್ಕಳು ಇಲ್ಲದೇ ಮಾಡಕ್ಕೆ ಆಸಕ್ತಿಯೂ ಇಲ್ಲ. ಪಠಾಕಿಯ ಶಬ್ಧವಿಲ್ಲ. ಅಪ್ಪನಿಗೂ ಗದ್ದೆ ಮಾಡ್ಲಿಕ್ಕೆ ಆಗ್ದೇ, ಗದ್ದೆ ಅಂಚಿಗೆ ಹೋಗಿ, ದೊಂದಿ ಹಚ್ಚಿ ಕೂಗು ಹಾಕುವವರಿಲ್ಲ. ವೃದ್ಧ ದಂಪತಿಗೆ, ಮನೆಯಿಂದ ಹೊರಗೆ ಹೋಗೋದೆ ಕಷ್ಟಸಾಧ್ಯವಾದ್ದರಿಂದ ದೇವಸ್ಥಾನದ ವರಗೂ ಆ ರಾತ್ರಿ ಹೋಗಿ ಕಾರ್ತಿಕ ದೀಪ ಮಾಡಿದಂತೆಯೇ.

   ಇನ್ನೆಲ್ಲಿಯ ದೀಪಾವಳಿ ಸ್ವಾಮಿ? ಮನೆಯಲ್ಲಿ ಒಂದು ಲೋಟ    ಪಾಯಸ ಮಾಡಿದ್ರೇ ಅದೇ ಹೆಚ್ಚು. ವಿಪರ್ಯಾಸ ಏನ್ ಗೊತ್ತಾ? ಅವರಿಗೆ ಸಕ್ಕರೆ ಖಾಯಿಲೆ ಏನಾದ್ರೂ ಇದ್ರೇ, ಪಾಯಸಕ್ಕೂ ಕತ್ತರಿನೇ. ಇನ್ನೇನು ದೀಪಗಳ ಹಬ್ಬ? ಇಷ್ಟೆಲ್ಲಾ ಇದ್ದು ಯಾವಾಗಲೂ ಶಾಂತವಾಗಿರೋ ಮನೇಲಿ ಹಬ್ಬದ ದಿನವೂ ಗದ್ದಲ ಕಾಣದ ವೃದ್ಧ ದಂಪತಿಗಳು,...
" ಯಾಕಾದರೂ ಬಂದಿದೆಯೋ ಹಬ್ಬದಾ ದಿವಸ,
ಮನೆಯಲಿ ಮಕ್ಕಳಿಲ್ಲ, ಮನಸಲಿ ಖುಷಿಯಿಲ್ಲ " ಅಂದುಕೊಳ್ಳುವುದೊಂದೇ.


   ಏನಾದ್ರೂ ಆಗ್ಲಿ, ಊರಲ್ಲಿ ಯಾರ್ ಕೂಗು ಕೇಳ್ದೇ ಇದ್ರೂ ಪರ್ವಾಗಿಲ್ಲಾ, ನಾನ್ ವರ್ಷಕ್ಕೊಂದ್ ಸರಿ ಸಿಕ್ಕೋ ಇಂಥಾ ಚಾನ್ಸ್ ಬಿಡಲ್ಲಾ. ನನ್ ಜೊತೆ ಕೂಗೋರೂ ಕೂಗ್ ಹಾಕ್ಬೋದು...

"ದೀಪೋಳ್ಗೆ ದೀಪ್ ದೀಪೋಳ್ಗೇ,
ಹಂಡೋಳ್, ಹಿಂಡೋಳ್
ಲಕ್ಷ್ಮೀ ಕೋಲ್ ದೀಪೋಳ್ಗೆ..
ಆಚೇ ಮನೆ, ದೊಡ್ಡಣ್ಣನ್ ಹೋಳ್ಗೇ,
ಈಚೇ ಮನೆ, ರಮೇಶ್ ಭಟ್ಟರ ಹೋಳ್ಗೇ,
ದೀಪೋಳ್ಗೆ ದೀಪ್ ದೀಪೋಳ್ಗೇ........"


- ಕೆ. ಸಿ. ಪಿ. ಕಾರಂತ್
  ಕಮ್ಮರಡಿ
18 / 10 / 19          11:43 PM

Comments

  1. ಸೂಪರ್ ಬ್ರದರ್
    ನಮ್ ಮಲ್ನಾಡ್ ದೀಪಾವಳಿ ಹಬ್ಬದ ಕುರಿತು ವಿಚಾರಧಾರೆ ಬಹಳ ಹಿಡಿಸ್ತು.

    ReplyDelete

Post a Comment

Popular posts from this blog

ನಾ ಕಂಡಂತೆ ನನ್ನೂರು

ಹಾಸ್ಟೆಲ್ ಕಥೆಗಳು - ೧

"ತ್ಯಾಗಿ" ಭಾಗ - 4 "ಜಿಮ್ಮಿ"