ತ್ರಿಶಂಕು ನರಕ

"ತ್ರಿಶಂಕು ನರಕ "



ಮಲೆನಾಡು ಹುಡುಗನ ಮಾರೆಲ್ ಸ್ಟೋರಿ...!!!


   
   ಬೆಂಗಳೂರು, ಇದೊಂದು ಮಾಯಾನಗರಿ. ಈ ಊರಿನ ವಿಶೇಷತೆಯೋ ಏನೋ ಗೊತ್ತಿಲ್ಲ, ಬೆಂಗಳೂರು ಯಾವತ್ತೂ ಯಾರನ್ನೂ ಹಸಿವಿನಿಂದ ಮಲಗಿಸಲ್ಲ. ಏನಿಲ್ಲವೆಂದರೂ, ಪ್ರತಿದಿನದ ಊಟ ಹುಟ್ಟಿಸಿಕೊಳ್ಳಲು ಇಲ್ಲಿ ಅಡೆತಡೆಗಳಿಲ್ಲ ಎಂದೇ ಹೇಳಬಹುದು. ಕೆಲಸ ಮಾಡುವ ಹುಮ್ಮಸ್ಸಿದ್ದರೆ ದುಡಿಮೆಗೆ ತಡೆಗೋಡೆಯಿಲ್ಲ. ಸ್ವಲ್ಪ ಜಾಸ್ತಿ ದುಡಿದರೆ, ಬಾಡಿಗೆ ಮನೆಗಳೂ ಲಭ್ಯ. ಇಲ್ಲವಾದಲ್ಲಿ ಬ್ಯಾಚುಲರ್ ರೂಮುಗಳಲ್ಲೇ 5-6 ಜನ ವಾಸಿಸುವುದನ್ನೂ ಕಂಡಿದ್ದೇನೆ. ಇನ್ನೂ ಸ್ವಲ್ಪ ಜಾಸ್ತಿ ಹಣ ಹರಿದಾಡಿದಲ್ಲಿ 1BHK, 2BHK ಮನೆಗಳೂ ಸಿಕ್ಕುವುದು. ಕೊನೆಯ ಪಕ್ಷ ಯಾವೂದೂ ಸಿಗದಿದ್ದರೇ, ಬಸ್ಸುಸ್ಟಾಂಡ್, ಪಾರ್ಕುಗಳೂ ಇವೆ.

   ಇಷ್ಟೆಲ್ಲಾ ಇದ್ದರೂ, ಈ ಬ್ರಹ್ಮಚಾರಿಗಳ ಜೀವನ ದೇವರಿಗೇ ಪ್ರೀತಿ. ಅವರ ಸ್ಥಿತಿ ಮಾತ್ರಾ ಯಾರಿಗೂ ಬೇಡ. ಬ್ರಹ್ಮಚಾರಿಗಳಿಗೆ ಮನೆಯ ಬಾಡಿಗೆ ನೀಡಲೇ ಎಲ್ಲರೂ ಹೆದರುತ್ತಾರೆ. ಕಾರಣಗಳೂ ಬಹಳಷ್ಟಿವೆ ಹಾಗಿರಲಿ. ಆದರೇ ಅದೆಷ್ಟೇ ದುಡಿದರೂ ಸ್ವಂತ ಜಾಗದಲಿ, ಸ್ವಂತ ಮನೆ ಕನಸಿನ ಮಾತೇ. ಕಾರಣವಿಷ್ಟೇ, ಮನೆಕಟ್ಟಲು ಜಾಗವೆಲ್ಲಿದೆ ಸ್ವಾಮಿ ಈ ಸಿಲಿಕಾನ್ ಸಿಟಿಯಲ್ಲಿ?

   ಅದೇನೋಪಾ, ಮನೆ ಮೇಲೆ ಮನೆಯಂತೆ, ಅದರಮೇಲೆ ಮತ್ತೊಂದು ಮನೆಯಂತೆ. ನೆಲದಮೇಲೆ ರೋಡಂತೆ, ಅದರ ಮೇಲೆ ಮತ್ತೊಂದು ರೋಡಂತೆ. ಅವೆಲ್ಲದರ ಮೇಲೆ ರೈಲಂತೆ. ಆ ಗುಡ್ಡ, ಕೆರೆಯ ಯೇರಿ, ರಾಜಕಾಲುವೆಗಳ ಒತ್ತುವರಿ ಮಾಡಿ ಕಟ್ಟಿದ ರಾಕ್ಷಸಾಕಾರದ ವಾಸಯೋಗ್ಯ ಬಹುಮಹಡಿ ಕಟ್ಟಡ ಉರುಫ್. ಅಪಾರ್ಟ್ಮೆಂಟುಗಳ ಹಾವಳಿಯೂ ಇತ್ತೀಚೆಗೆ ಬಹಳವೇ ಆಗಿದೆ. ಅಲ್ಲಿ ಮನೆಯ ಖರೀದಿಸಿದರೂ, ಆ ಸೈಟಿನ ಮೇಲೆ ನಿಮಗೆ ಯಾವ ಹಕ್ಕೂ ಇರುವುದಿಲ್ಲವೆಂಬುದೇ ವಿಪರ್ಯಾಸ. ಒಟ್ಟಾರೆ ಇದು ಬೆಂದಕಾಳೂರಿನ ಚಿತ್ರಣ.

   ಈ ಬೆಂದಕಾಳೂರೆಂಬ ಅನಾಮಿಕ ಜಗತ್ತಿನಲ್ಲಿ ಅನಾಮಧೇಯನಾಗಿ ಉಸಿರು ಅದುಮಿಕೊಂಡು, ಜೀವನ ಅನುಸರಿಸಲು ಶುರುಮಾಡಿ ಇಂದಿಗೆ 18 ವರ್ಷಗಳು. ಈ ನಗರದ ಮಿಡಿತಗಳನ್ನು ಬಲ್ಲೆ ನಾನು. 18 ವರ್ಷಗಳ ಹಿಂದಿನ ಆ ದಿನ ಇಂದಿಗೂ ನೆನಪಿದೆ. ಅದು 2000  ಆಗ ಇಷ್ಟೇನು ದೊಡ್ಡದಾಗಿರಲಿಲ್ಲ ಈ‌ ಬೆಂಗಳೂರು. ನನಗೆ ಆಗಿನ್ನೂ 10 ರ ಆಸುಪಾಸು. ನನ್ನ ಊರು ತೀರ್ಥಹಳ್ಳಿಯಿಂದ ಕೆಲವೇ ಕಿಲೋಮೀಟರ್ ದೂರದ, ಸಣ್ಣ ಗ್ರಾಮ ಹೊನ್ನೇತಾಳು. ಕುಂದಾದ್ರಿ ಗುಡ್ಡದ ಬುಡಕ್ಕೆ ಅಂಟಿಕೊಂಡಿದ್ದ ಗ್ರಾಮವದು.

   ಮಲೆನಾಡಿನಿಂದ ಬಂದ ಎನಗೆ ಈ ಬೆಂದಕಾಳೂರು ಮಾಯಾನಗರಿಯಂತೆ ಕಂಡದ್ದು ಸುಳ್ಳಲ್ಲ. ಗಗನಚುಂಬಿ ಕಟ್ಟಡಗಳು, ಬಣ್ಣ ಬಣ್ಣದ ಬದುಕು. ಆದರೇ, ಈ ಬಣ್ಣದ ಬದುಕಿಗೆ ಮಾರಿಹೋಗಿ ಬಂದವನಲ್ಲ ನಾನು. ಊರು ಹೊನ್ನೇತಾಳಿನಲ್ಲಿದ್ದ 5 ಗುಂಟೆ ಗದ್ದೆಗೆ ಮಾಡಿದ್ದ ಸಾಲ ತೀರಿಸಲಾಗದೇ, ನನ್ನ ಅಪ್ಪ ಅಮ್ಮ ಇಬ್ಬರೂ ನೇಣಿಗೆ ಶರಣಾದ ಮೇಲೆ, ನನ್ನ ಕಡೆಗೆ ಯಾವ ನೆಂಟರಿಷ್ಟರೂ ತಿರುಗಿ ನೋಡದ ಕಾರಣ, ಹೊತ್ತು ಊಟಕ್ಕಾಗಿ ಬೆಂಗಳೂರು ನನ್ನ ಕೈ ಬೀಸಿ ಕರೆದಿತ್ತು. ಅಲ್ಲ ಇಲ್ಲೊಂದು ವಿಷಯ ನಾ ಹೇಳಲೇ ಬೇಕು, ಇದ್ದಿದ್ದ ಜಮೀನು 5 ಎಕರೆಯಾಗಿದ್ದರೆ, ಯಾರಾದರೂ, ಅವರ ಮಕ್ಕಳೊಡನೆ ನನ್ನನ್ನೂ ಸಾಕುತ್ತಿದ್ದರೆನೋ? ಆದರೇ, ಇದ್ದ 5 ಗುಂಟೆಯಲ್ಲಿ ನಮ್ಮ ಮನೆಗಾಗುವಷ್ಟೇ ಭತ್ತ ಬೆಳೆಯಲಾಗುತ್ತಿರಲಿಲ್ಲ. ಕೆಲವೊಮ್ಮೆ ನಾವು ಬೆಳೆದ ಭತ್ತ ಖಾಲಿಯಾಗಿ, ಬೇಸಿಗೆಯಲ್ಲಿ ಕೊನೆಗೆ ಸೊಸೈಟಿಯ ಅಕ್ಕಿಯನ್ನು ಉಂಡಿದ್ದೂ ಇದೆ‌. ಇನ್ನು ಕೆಲವೊಮ್ಮೆ ಅದೂ ಇಲ್ಲದ ಪಕ್ಷದಲ್ಲಿ, ರಾಗಿ ಅಂಬಲಿಯಲ್ಲೇ ಹೊಟ್ಟೆ ತುಂಬಿಸಿಕೊಂಡಿದ್ದೂ ಇದೆ‌. ಇರುವ ಆ 5 ಗುಂಟೆ ಜಮೀನಿನಲಿ ಏನು ಮಾಡಲು ಸಾಧ್ಯ? ಅದಕ್ಕೆಂದೇ ನೆಂಟರಿಷ್ಟರಿಗೂ ನನ್ನ ಕರೆದೊಯ್ಯುವ ಮನಸಾಗದೇ, ಅವರವರ ಮನೆಗೆ ಹೆಜ್ಜೆ ಹಾಕಿದ್ದರಿಂದ, ನನ್ನ ಅನ್ನವನ್ನು ನಾನೇ ಸಂಪಾದಿಸಬೇಕಾಗಿ, ಈ ಮಾಯಾನಗರಿಯನ್ನ ತಲುಪಿದ್ದಾಯ್ತು‌.

   ಅಂದು ಊರಿನಿಂದ ಹೊರಟಿದ್ದ ದಿನವನ್ನೂ ನಾನು ಮರೆತಿಲ್ಲ‌. ಅಂದೋ ದನಗೋಳು ಮಳೆ‌. ಬಹುಶಃ, ಊರೇ ನನ್ನ ಮಗನನ್ನು ಕಳೆದುಕೊಳ್ಳುತ್ತಿರುವೆನಲ್ಲಾ ಎಂದು ಕಣ್ಣೀರಿಟ್ಟಂತಿತ್ತು. ಆದರೇ ಮಾಡುವುದಾದರೂ ಏನು? ಅಲ್ಲಿ ನನ್ನವರು ಎಂಬವರು ಯಾರೂ ಇಲ್ಲ, ಇದ್ದರೂ ಪ್ರಯೋಜನವಿಲ್ಲ. ಹಾಗಾಗಿ ಕಾಣದ ದಾರಿಯಲಿ ಕೇಳಿದ್ದ ಊರಿನ ಕಡೆಗೆ ಎನ್ನ ಪಯಣ ಪ್ರಾರಂಭವಾಗಿತ್ತು. ಕಗ್ಗತ್ತಲ ರಾತ್ರಿಯಲ್ಲಿ ಆ KSRTC ಕಂಪುಡಬ್ಬಿಯ ಬಸ್ಸೇ ನನ್ನ ಕೈ ಹಿಡಿದು ದಾರಿ ತೋರುತಿರುವಂತೆ ಕಂಡಿತ್ತು.

   ಬೆಳಿಗ್ಗೆ ಬೆಂಗಳೂರು ತಲುಪಿದಾಗ ಮುಂಜಾನೆ 5:30 ಇರಬಹುದು. ಇಲ್ಲಿಯೂ ಮಳೆರಾಯನ ಆರ್ಭಟ ನಿಂತಿರಲಿಲ್ಲ. ಓಹ್, ನನಗೀಗ ಅರ್ಥವಾಯಿತು. ಇರುವ ಇಷ್ಟೊಂದು ಜನರ ನಡುವೆ ನೀನೊಬ್ಬ ಸೇರಿಕೊಂಡೆಯಾ ಎಂದು ನೋವಿನಿಂದ ಕಣ್ಣೀರಿಡುತ್ತಲೇ ಬರಮಾಡಿಕೊಂಡಿತ್ತು ಬೆಂಗಳೂರು. ಬೆಂಗಳೂರು ನನಗೆ ಮಲತಾಯಿಯಾದರೂ, ಮಾತೃವಾತ್ಸಲ್ಯ ಮರೆತಿರಲಿಲ್ಲ, ಮರೆಯಲಿಲ್ಲ.

   ಹೊಸ ಊರು, ಹಸಿದ ಹೊಟ್ಟೆ, ಹೋದಕಡೆಯೆಲ್ಲಾ ಹೊಸ ಹೊಸ ಮುಖಗಳೇ. ಏನು ಮಾಡಲೆಂದು ತಿಳಿಯದೇ, ಮೆಜೆಸ್ಟಿಕ್ ನ ಬಸ್ಟ್ಯಾಂಡ್ ಒಂದು ಮೂಲೆಯಲ್ಲಿ, ಗೋಡೆಗೆ ಒರಗಿ ಕೂತಿದ್ದಷ್ಟೇ ನೆನಪು. ನಿದಿರಾದೇವಿ ನನ್ನ ಆವರಿಸಿದ್ದಳು. ಇದ್ದಕ್ಕಿದ್ದಂತೆ ಒಂದು ನಾಣ್ಯದ 'ಟಣಾರ್' ಎಂಬ ಶಬ್ದದಿಂದ ಎಚ್ಚರಾದಾಗ ಬೆಳಕು ಬಿಟ್ಟು ಒಂದರಹಿಂದೆ ಒಂದರಂತೆ ಹೋಗುವ ಬಸ್ಸುಗಳು ಕಂಡವು. ನೆಲದಲ್ಲಿ ನೋಡಿದರೆ, 1,2,5 ರೂಪಾಯಿಯ ನಾಣ್ಯಗಳು. ಓಹ್, ಅವರೆಲ್ಲ ನನ್ನನ್ನು ಭಿಕ್ಷುಕನೆಂದುಕೊಂಡಿರಬೇಕು. ನಾಣ್ಯಗಳನ್ನು ಎಣಿಸಿದೆ, ' 14 ರೂಪಾಯಿ'. ಸ್ವಾಭಿಮಾನಿಯಾದ ನನಗೆ ಅದ್ಯಾರದೋ ಎಂದು ಹುಡುಕಿ ಕೊಟ್ಟು ಬರಬೇಕೆಂಬ ಬಯಕೆ, ಆದರೇ ಈ ಹಾಳು ಹೊಟ್ಟೆಯ ಹಸಿವು? ಹೇಗೋ ಬೆಳಗಿನ ಉಪಹಾರವಾಯ್ತು, ಮಧ್ಯಾಹ್ನಕ್ಕೆ?

   ಇದೇ ಪ್ರಶ್ನೆ ಕಾಡಲಾರಂಭಿಸಿ, ಕೆಲಸ ಕೇಳಲೊಸುಗ ಅಂಗಡಿಯಿಂದ ಅಂಗಡಿಗೆ ಅಲೆದರೆ, ಅವರೆಲ್ಲ ಸಣ್ಣ ಹುಡುಗನೆಂದು ಗೇಲಿ ಮಾಡುವುದನ್ನು ಬಿಟ್ಟು, ಬಿಡಿಗಾಸೂ ಹುಟ್ಟಲಿಲ್ಲ. ಹೊಟ್ಟೆ ಚುರ್ ಎನ್ನಲಾರಂಭಿಸಿ, ಸ್ವಾಭಿಮಾನ ಮರೆತು, ಮತ್ತೆ ಅಂಗೈ ಆಗಸವನ್ನೇ ದಿಟ್ಟಿಸಿ ನೋಡಿತ್ತು. ಮಧ್ಯಾಹ್ನದ ಊಟವಾಯ್ತು. ಹೀಗೆ ಕೆಲವುದಿನ ಜೀವನ ನೆಡೆಯುತ್ತಿರಬೇಕಾದರೇ, ಅಲ್ಲೇ ಮೆಜಸ್ಟಿಕ್ ನ ಗೂಡಾಅಂಗಡಿಯಲ್ಲಿ ಕೆಲಸಕ್ಕೆ ಸೇರಿದೆ. ಅದೂ ಕೆಲವು ದಿನಗಳಷ್ಟೇ, ಆಮೇಲೆ ಹೋಟೆಲಿನಲ್ಲಿ ಕ್ಲೀನರ್ ಆಗಿ, ಕೊನೆಗೆ ಸಪ್ಲೇಯರ್ ಆಗಿ ಭಡ್ತಿ ಸಿಕ್ಕಿತ್ತು.

   2008 ರ ಬಾಂಬು ಸ್ಪೋಟ ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ‌. ಬೆಂಗಳೂರಿಗೆ ಬಂದು 8 ವರ್ಷವಾಗಿತ್ತು. ನಾನು ಇದ್ದಿದ್ದೇ ಮಡಿವಾಳ ಬಳಿಯ ಒಂದು ಹೋಟೆಲಿನಲ್ಲಿ. ಅಂದು ಶುಕ್ರವಾರವಾದ್ದರಿಂದ ಯಾವುದೋ ಕನ್ನಡ ಚಿತ್ರ ನೋಡಲು ಹೊರಡಲನುವಾಗಿದ್ದ ನನಗೆ ಆಡುಗೊಡಿಯ ಬಳಿ ಬಾಂಬುಸ್ಪೋಟದ ಬಗ್ಗೆ ತಿಳಿದು, ಅಲ್ಲಿಗೆ ಅದನೇ ನೋಡಲೋಗಿದ್ದೆ. ಅಷ್ಟೊಂದು ದೊಡ್ಡ ಮಟ್ಟದ ಬಾಂಬು ಅಲ್ಲವಾದರೂ, ಒಮ್ಮೆಗೆ ಇಡಿಯ ಬೆಂಗಳೂರನ್ನು ತಲ್ಲಣಗೊಳಿಸಿತ್ತು. ಆಡುಗೊಡಿಯೊಂದೇ ಅಲ್ಲದೇ, ಮಡಿವಾಳ, ನಾಯಂಡಳ್ಳಿ, ಮಲ್ಯ ಹಾಸ್ಪಿಟಲ್ ಹೀಗೆ ಹಲವೆಡೆ ಬಾಂಬು ಸ್ಪೊಟ ಬೆಂಗಳೂರು ಜನತೆಯ ನಿದ್ದೆಗೆಡಿಸಿತ್ತು. ಆದರೇ, ಈಗ ಅವೆಲ್ಲಾ ಮುಗಿದ ಅಧ್ಯಾಯಗಳಷ್ಟೇ.

   ಬೆಂಗಳೂರೆಂಬ ಮಾಯಾ ನಗರಿ ಒಳ್ಳೆಯದರ ಜೊತೆಜೊತೆಗೇ, ಕೆಟ್ಟದ್ದನ್ನೂ ಅಷ್ಟೇ ಸಲೀಸಾಗಿ ಕಲಿಸುತ್ತದೆ. ಹೋಟೆಲಿನಲ್ಲಿ ಸಪ್ಲೇಯರ್ ಆಗಿದ್ದ ನನಗೆ, ಅದೊಂದು ದಿನ ಒಬ್ಬರ ಪರಿಚಯವಾಗಿ, ತಿಂಡಿ ಸಪ್ಲೇ ಮಾಡುತ್ತಿದ್ದ ಕೈಗಳಲ್ಲಿ ಬೇರೆಯ ವಸ್ತುಗಳ ಸಪ್ಲೇ ಮಾಡಲೂ ಪ್ರಾರಂಭಿಸಿದೆ. ಗಾಂಜಾ, ಡ್ರಗ್ಸ್ ಹೀಗೆ ಕಳ್ಳ ಮಾಲುಗಳಿಂದ ಪ್ರಾರಂಭವಾದ ಈ ಕೆಲಸ, ಕೊನೆಗೆ ಮಾಂಸ ದಂಧೆಗೂ ಇಳಿದುಬಿಟ್ಟಿತ್ತು. ಆ ಕೆಲವೇ ಕೆಲವು ವರ್ಷಗಳಲ್ಲಿ ಬೆಂಗಳೂರಿನ ಇನ್ನೊಂದು ಕರಾಳ ಮುಖವನ್ನೂ ಕಂಡಿದ್ದೆ. ಬೆಳಿಗ್ಗೆಯಿಂದ ರಾತ್ರಿವರೆಗೆ ಒಂದು ತರವಾದರೇ, ರಾತ್ರಿಯಿಂದ ಬೇರೆಯದೇ ಲೋಕ ತೆರೆದುಕೊಳ್ಳುತ್ತಿತ್ತು. ಎಗ್ಗಿಲ್ಲದೇ ಸಾಗಿದ್ದ ಗಾಂಜಾ,ಅಫೀಮು, ಡ್ರಗ್ಸ್ ದಂಧೆಯ ಜೊತೆಗೆ ಮಾಂಸದಂಧೆಯಿಂದ ಹಣವನ್ನೇನೋ ಗಳಿಸಿದೆ. ಆದರೇ, ಆದರ್ಷವಿಲ್ಲದ ಜೀವನದಲ್ಲಿ ಏನಿದ್ದರೇನು? ಎಷ್ಟಿದ್ದರೇನು? ಇಂತಹಾ ಯಾವುದೇ ಕೆಲಸವಾಗಲಿ ಒಳಹೊಕ್ಕುವುದು ಸುಲಭ, ಹೊರಬರುವುದು ಬಹಳ ಕಷ್ಟ. ಬಹಳ ಪ್ರಯಾಸದಿಂದ ಹೊರಬಂದರೂ, ಬಿಟ್ಟೆನೆಂದರೂ, ಬಿಡದೀ ಮಾಯೆ ಎಂಬಂತೆ ಮನಸಿನಲಿ ಮಾಸದ ನೋವಿನ ಮಾರ್ಧನಿ ಇಂದಿಗೂ ಧ್ವನಿಸುತಿದೆ.

   ಅತ್ತ ಎಲ್ಲರಿಗೂ ಕಾಣುವ ಒಂದು ಮುಖ, ಇತ್ತ ಕಾಣದ ಮತ್ತೊಂದು ಮುಖವನ್ನೂ ಕಂಡಿದ್ದ ನನಗೇ, 25ನೇ ವಯಸ್ಸಿಗೇ ಎಲ್ಲ ಬೇಡೆನಿಸಿ, ಮತ್ತದೇ ಹಳೆಯ ಹಾದಿಯ ಹಿಡಿದು ಹೊರಟರೆ, ಇತ್ತ ನನ್ನ ಗದ್ದೆಯೂ, ನನ್ನ ಮನೆಯೂ ಎಲ್ಲಿತ್ತು ಎಂಬ ಕುರುಹೇ ಮಾಯವಾಗಿತ್ತು. ಗದ್ದೆಯಿದ್ದ ಜಾಗದಲ್ಲಿ ಅದ್ಯಾವುದೋ ರಬ್ಬರು ಮರಗಳ ನೆಟ್ಟು, ಅನ್ನ ಕೊಡುವ ಭೂಮಿಯನು ಹಣದ ಮಶೀನಿನಂತೆ ಬದಲಾಯಿಸಲಾಗಿತ್ತು. ಊರ ಗೌಡರು, ನನ್ನ ತಂದೆ ಮಾಡಿದ ಸಾಲಕ್ಕೆ ಈ ಗದ್ದೆಯನ್ನು ಅವರ ಹೆಸರಿಗೆ ಮಾಡಿಕೊಂಡಿದ್ದರು.

   ಆಧುನೀಕತೆಯ ಹಾದಿಯಲಿ ಸಾಗಿ ನನ್ನ ಮನೆಯ ನೆಲಗಟ್ಟೂ ನನಗೆ ಕಾಣಿಸದಿದ್ದಾಗ, ನನಗೆ ಅನಿಸಿದ್ದಿಷ್ಟೇ. ಮನುಷ್ಯ ಆಧುನೀಕತೆಯ ನೆಪವೊಡ್ಡಿ, ಪಾಶ್ಚಾತ್ಯ ಪ್ರೇರಕಶಕ್ತಿಗೆ ಮಾರುಹೋಗಿ ಮರುಳನಾಗುತ್ತಿದ್ದರೇ, ಒಂದು ಪ್ರಶ್ನಾರ್ಥಕ ಚಿಹ್ನೆ ನನ್ನ ಜೀವನದ ಬಗೆಗೆ ನನಗೇ ಮೂಡಿತು.

   ಅತ್ತ ಬೆಂಗಳೂರು ನನಗೆ ಬೇಡ, ಇತ್ತ ನನ್ನೂರಿಗೆ ನಾನು ಬೇಡ, ಹಾಗಾದರೇ ನಾನೆಲ್ಲಿ ಸಲ್ಲುವೆನು? ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟಾಗ ಹೊಳೆದದ್ದು, ಆ ತ್ರಿಶಂಕು ಸ್ವರ್ಗದಂತೆ ನಾನೀಗ ತ್ರಿಶಂಕು ನರಕದಲ್ಲಿ. ಅತ್ತ ಪೂರ್ಣ ನರಕಕ್ಕೂ ಹೋಗಲಾಗದೇ, ಇತ್ತ ಈ ಭೂಮಿಯಲ್ಲೂ ಇರಲಾಗದೇ, ನನದು ತ್ರಿಶಂಕು ನರಕವೇ ....

(ಇದೊಂದು ಕಾಲ್ಪನಿಕ ಕಥೆ. ಇಂತಹುದೇ ಘಟನೆ ಯಾರಾದರೂ ಜೀವನಕ್ಕೆ ಹೊಂದಿಕೆ ಕಂಡುಬಂದರೇ, ಅದು ಕಾಕತಾಳೀಯವಷ್ಟೇ )

- ಕೆ‌. ಸಿ. ಪಿ. ಕಾರಂತ್
ಕಮ್ಮರಡಿ

9 / 12 / 2018          1:45AM

Comments

Post a Comment

Popular posts from this blog

ನಾ ಕಂಡಂತೆ ನನ್ನೂರು

ಹಾಸ್ಟೆಲ್ ಕಥೆಗಳು - ೧

"ತ್ಯಾಗಿ" ಭಾಗ - 4 "ಜಿಮ್ಮಿ"