"ತ್ಯಾಗಿ" ಭಾಗ - 5 ತನ್ನವರಿಗಾಗಿ ತನ್ನದೆಲ್ಲವ ತೊರೆದವನು...!!!
ಭಾಗ - 5
"ತ್ಯಾಗಿ"
ತನ್ನವರಿಗಾಗಿ ತನ್ನದೆಲ್ಲವ ತೊರೆದವನು...!!!
(ಇದೊಂದು ಕಾಲ್ಪನಿಕ ಕಥೆಯಾಗಿದ್ದೂ, ಯಾವುದೇ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ್ದಲ್ಲ. ಹಾಗೂ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕಾತಾಳೀಯವಷ್ಟೇ)
ನಾರಾಯಣಯ್ಯನಿಗೋ ವಯಸ್ಸಾಗುತ್ತಿತ್ತು. 80 ಯುಗಾದಿಯನ್ನೂ ಕಂಡಿದ್ದಾಗಿತ್ತು. ವಯೋಸಹಜ ಖಾಯಿಲೆಗಳು ಅವರನ್ನೂ ಬಿಟ್ಟಿರಲಿಲ್ಲ. ಆದರೇ ಹುಷಾರಿಲ್ಲ ಎಂಬ ಕಾರಣಕ್ಕೆ ಯಾವತ್ತೂ ಮಲಗಿದವರಲ್ಲ. ಅವರದ್ದೋ ಎರಡನೆಯ ಮಗ ಗಣೇಶನಿಗೆ ಮದುವೆ ಮಾಡಿಸಬೇಕೆಂಬುದೊಂದೇ ಹಠ. ಆದರೇ ಗಣೇಶ ಮಾತ್ರ ಯಾವ ಕಾರಣಕ್ಕೂ ಒಪ್ಪಿದವನಲ್ಲ.
ಅಣ್ಣನ ಮದುವೆಯ ಸಂದರ್ಭದಲ್ಲಿ ತನ್ನ ಮದುವೆಗೆ ಕಾಯುತ್ತಲಿದ್ದ ಗಣೇಶ, ಈಗ ಮಾತ್ರ ಮದುವೆಯಾಗಲ್ಲ ಎಂಬುದಕ್ಕೆ ಕಾರಣವೂ ಇತ್ತು. ಎಲ್ಲಿ ಮದುವೆಯಾದರೆ ಬಂದ ಮಡದಿಯಿಂದ ತನ್ನ ಮನೆ ಒಡೆದು ಎರಡು ಪಾಲಾಗಬಹುದೇನೋ? ನನಗೆ ಮಕ್ಕಳಾಗಿ ಎಲ್ಲಿ ತನ್ನ ಅಣ್ಣನ ಮಕ್ಕಳ ಮೇಲೆ ಪ್ರೀತಿ ಕಡಿಮೆಯಾಗಬಹುದೇನೋ ಎಂಬುದು ಅವನ ಯೋಚನೆಯಾಗಿತ್ತು. ಹಾಗಾಗಿ ನಾರಾಯಣಯ್ಯ ಎಷ್ಟು ಒತ್ತಾಯ ಮಾಡಿದರೂ ಗಣೇಶ ಕೇಳುವಂತವನಾಗಿರಲಿಲ್ಲ. ಅದಲ್ಲದೆ, ಇಂದಿಗೂ ಅದೊಂದು ಪೂರ್ವಾಗ್ರಹ ಪೀಡಿತ ಹಳ್ಳಿಯಾಗಿ, ಹಾಳು ಕೊಂಪೆಯಂತೇ ಇದ್ದಿದ್ದರಿಂದ ಯಾರೂ ಹೆಣ್ಣು ಕೊಡಲೂ ಮುಂದೆ ಬಂದಿರಲಿಲ್ಲ.
ಸುಬ್ರಹ್ಮಣ್ಯನ ಮಕ್ಕಳೂ ದೊಡ್ಡವರಾದರು. ದೊಡ್ಡವನು ಪಿಯುಸಿ ಓದುತ್ತಿದ್ದರೆ, ಮಗಳು ಮತ್ತು ಮಗ ಈಗ ಹೈಸ್ಕೂಲು. ಪುಷ್ಪವತಿಗೂ ಮಕ್ಕಳ ಭವಿಷ್ಯ ಮುಖ್ಯವಾಗಿತ್ತು. ಇದೇ ಹಳ್ಳಿಯಲ್ಲಿದ್ದರೇ ಮಕ್ಕಳ ವ್ಯಾಸಾಂಗ, ಮದುವೆ ಎಲ್ಲವೂ ಕಷ್ಟವೇ ಎಂದು ಆಲೋಚಿಸಿದಳು. ಅವಳ ಆಲೋಚನೆಯೂ ಸರಿಯೇ, ಆ ಹಳ್ಳಿಯಲ್ಲಿದ್ದು ಮಾಡುವುದಾದರೂ ಏನು? ಆದಾಯವೂ ಅಷ್ಟಕ್ಕಷ್ಟೇ. ಅಲ್ಲದೇ, ತೋಟಕ್ಕೆ ಕೊಳೆ ರೋಗ. ಇಳುವರಿಯೂ ಕಮ್ಮಿಯೇ. ಅವಳಿಗೆ ಅವಳ ಮಕ್ಕಳ ಭವಿಷ್ಯ ಮುಖ್ಯವಾಗಿತ್ತು.
ಬಹಳ ದಿನಗಳಿಂದ ಸುಬ್ರಹ್ಮಣ್ಯನನ್ನು ಈ ವಿಚಾರವಾಗಿ ಕಾಡುತ್ತಲೇ ಇದ್ದಳು. ಆಸ್ತಿಯನ್ನು ಪಾಲು ಮಾಡೋಣ, ನಾವು ಈ ಹಳ್ಳಿ ಬಿಟ್ಟು, ಎಲ್ಲಾದರೂ ಸಿಟಿಗೆ ಹೋಗೋಣವೆಂಬುದೊಂದೇ ಹಠ ಅವಳದ್ದು. ಸುಬ್ರಹ್ಮಣ್ಯನಿಗೆ ಮನೆಗೆ ಬೇರೆ ಹೆಣ್ಣು ದಿಕ್ಕಿಲ್ಲವೆಂಬ ಚಿಂತೆ. ತಮ್ಮ ಗಣೇಶನಿಗೂ ಮದುವೆಯ ವಯಸ್ಸು ಮೀರಿ, ಗಡ್ಡ ಮೀಸೆಗಳೆಲ್ಲಾ ಹಣ್ಣಗುತ್ತಿದ್ದವು. ಹಾಗೆಂದು ಹೆಂಡತಿಯ ಮಾತನ್ನೂ ಧಿಕ್ಕರಿಸುವ ಹಾಗಿರಲಿಲ್ಲ.
ಈ ಆಸ್ಥಿ ಭಾಗದ ವಿಷಯವನ್ನು ಸುಬ್ರಹ್ಮಣ್ಯ, ನಾರಾಯಣಯ್ಯನ ಮುಂದಿಟ್ಟ. ನಾರಾಯಣಯ್ಯ ಸಿಟ್ಟಿನಿಂದ "ನನ್ನ ಕೊನೆ ಉಸಿರು ಇರುವ ವರೆಗೂ, ಈ ಆಸ್ಥಿ ಪಾಲುಮಾಡಲು ನಾನು ಬಿಡೋದಿಲ್ಲ. ನಾನು ಸತ್ತಮೇಲೆ, ನೀವು ಏನು ಬೇಕಾದರೂ ಮಾಡಿಕೊಳ್ಳಿ. ಕೇಳಲಿಕ್ಕೆ ನಾನೂ ಇರುವುದಿಲ್ಲ." ಎಂದು ಕೂಗಾಡಿದರು. ಆದರೇ, ಈಗ ಸುಬ್ರಹ್ಮಣ್ಯನಿಗೂ ಹಳ್ಳಿಯಲ್ಲಿ ಇರುವ ಮನಸ್ಸಿರಲಿಲ್ಲ. ಆದರೇ, ಪೇಟೆಗೆ ಹೋಗಿ ಮಾಡುವುದಾದರೂ ಏನು? ಇವನನ್ನು ಕರೆದು ಕೆಲಸ ಕೊಡಲು ಏನು ಡಿಗ್ರಿ ಮಾಡಿದ್ದಾನೋ? ಅಲ್ಲದೇ, ಡಿಗ್ರಿ ಮಾಡಿದವರೇ ಈಗ ಕೆಲಸವಿಲ್ಲದೇ ದಂಡ ಪಿಂಡಗಳಂತೆ ಕೂತಿರುವಾಗ ಇವನೇನು ಮಾಡಿಯಾನು?
ಹೀಗಿರುವಾಗ ಒಂದು ದಿನ ದಾವಣಗೆರೆಯ ಮಹಾಬಲ ಜೋಯಿಸರಿಂದ ಸುಬ್ರಹ್ಮಣ್ಯನ ಹೆಸರಿಗೆ ಒಂದು ಪತ್ರ ಬರುತ್ತದೆ. ಅದರಲ್ಲಿ ಮಹಾಬಲ ಜೋಯಿಸರು, ದಾವಣಗೆರೆಯ ಒಂದು ಹೋಟೆಲಿನಲ್ಲಿ ಅಡಿಗೆ ಭಟ್ಟರ ಕೆಲಸ ಖಾಲಿ ಇರುವುದಾಗಿಯೂ, ಈ ಕೂಡಲೇ ಹೊರಟು ಬಂದಲ್ಲಿ ತಾನೇ ಮಾತನಾಡಿ ಕೆಲಸ ಕೊಡಿಸುವುದಾಗಿಯೂ ಬರೆದಿದ್ದರು.
ಸುಬ್ರಹ್ಮಣ್ಯನೂ ಅಡಿಗೆಯನ್ನು ಬಲ್ಲವನೇ ಆಗಿದ್ದರಿಂದ ಕೂಡಲೇ ಈ ವಿಷಯವನ್ನು ನಾರಾಯಣಯ್ಯ ನಿಗೆ ಹೇಳಿದನು. ನಾರಾಯಣಯ್ಯ ಎಷ್ಟೇ ಸಿಡುಕಿದರೂ, ಬೇಡವೆಂದರೂ, ಸುಬ್ರಹ್ಮಣ್ಯ ಹೊರಡಲು ತಯಾರಿ ನೆಡೆಸಿಯಾಗಿತ್ತು. ದಂಪತಿಗಳು ತಮ್ಮ ಸಾಮಗ್ರಿಗಳನ್ನು ಗಂಟುಕಟ್ಟಿ ಹೊರಟಾಗಿತ್ತು. ಮಕ್ಕಳು ಮೂವರೂ ಹಾಸ್ಟಲ್ ನಲ್ಲಿ ಇದ್ದಿದ್ದರಿಂದ, ಇವರಿಬ್ಬರೇ ಹೊರಟಿದ್ದರು. ಅಂದು ಅವರು ಹೊರಡುವ ದಿನ ಮಾತ್ರ, ನಾರಾಯಣಯ್ಯ ಮೌನವಾಗಿದ್ದರು.
ಐದಾರು ವರ್ಷಗಳೇ ಕಳೆದವು. ಅತ್ತ ಸುಬ್ರಹ್ಮಣ್ಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದವನು, ಹೊಸದೊಂದು ಸ್ವಂತ ಹೋಟೆಲ್ ಶುರು ಮಾಡಿದ್ದ. ಉತ್ತಮ ವಹಿವಾಟು ನೆಡೆಸುತ್ತಿದ್ದ. ಇತ್ತ ನಾರಾಯಣಯ್ಯ ಮತ್ತು ಸುಬ್ಬಮ್ಮ ಇಬ್ಬರೂ ಹಾಸಿಗೆ ಹಿಡಿದಿದ್ದರು. ದಂಪತಿಗೆ ಉಸಿರಾಟವೇ ಕಷ್ಟವಾಗಿತ್ತು. ಅವರಿಬ್ಬರ ಆರೈಕೆಯನ್ನೂ ಗಣೇಶನೇ ನೋಡಿಕೊಳ್ಳುತ್ತಿದ್ದ. ಅವರ ಸ್ನಾನ, ನಿತ್ಯಮಕರ್ಮಗಳಿಂದ ಹಿಡಿದು ಊಟ, ತಿಂಡಿ, ಔಷಧಿಗಳವರೆಗೂ ಅವನೊಬ್ಬನೇ ಎಲ್ಲ ನೋಡಿಕೊಳ್ಳುತ್ತಿದ್ದನು.
ಸುಬ್ರಹ್ಮಣ್ಯನಿಗೆ ಈಗ ಎಲ್ಲವೂ ಇದ್ದವು, ಆದರೇ ಸಮಯ?
ಸಮಯ ಮಾತ್ರಾ ಇರಲಿಲ್ಲ. ಮನೆಗೆ ಹೋಗಿ ಅಪ್ಪ ಅಮ್ಮಂದಿರ ಕೊನೆಯ ದಿನಗಳನ್ನು ಅವರೊಂದಿಗೆ ಕಳೆಯುವಾಸೆ. ಆದರೆ, ವ್ಯಾಪಾರ ಬಿಟ್ಟು ಹೋಗುವಂತಿರಲಿಲ್ಲ. ಮಕ್ಕಳೂ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದರಿಂದ, ಅವರನ್ನೂ ಹೋಟೆಲ್ ನೋಡಿಕೊಳ್ಳಲು ಕರೆಯಲಾಗ್ತಾ ಇರಲಿಲ್ಲ. ಎಲ್ಲವೂ ಇರುವಾಗ ಅದರ ಮೌಲ್ಯ ಗೊತ್ತಾಗುವುದಿಲ್ಲ ಎಂಬುದು ಎಷ್ಟು ಸತ್ಯ ನೋಡಿ.
ಚಳಿಗಾಲ ಬೇರೆ, ನಾರಾಯಣಯ್ಯ ದಂಪತಿಗೆ ಆರೋಗ್ಯ ಉಲ್ಬಣವಾಗುತ್ತಲಿತ್ತು. ಉಸಿರಾಟದ ತೊಂದರೆ ಬೇರೆ. ಗಣೇಶನೊಬ್ಬನೇ ಎಷ್ಟೆಂದು ನೋಡಿಕೊಂಡಾನು? ಶಕ್ತಿಮೀರಿ ರಾತ್ರಿಯೆಲ್ಲಾ ನಿದ್ರೆಗೆಟ್ಟು ಅವರ ಪಾಲನೆ, ಪೋಷಣೆ ಮಾಡುತ್ತಿದ್ದನು. ಜೊತೆಗೆ ತೋಟದ ಕೆಲಸಗಳೂ ಅವನ ಮೇಲೆಯೇ ಇತ್ತು. ಗದ್ದೆ ಕೆಲಸ ಮಾಡಲು ಜನರು ಸಿಗದೇ ಗದ್ದೆಯನ್ನು ಹಾಳು ಬಿಟ್ಟಾಗಿತ್ತು. ತೋಟಕ್ಕೋ ಕೊಳೆ ರೋಗ, ಕೂಲಿಯಾಳುಗಳೋ ಕೆಲಸ ಮಾಡುವುದನ್ನೇ ಬಿಟ್ಟಿದ್ದಾಗಿದೆ. ರೈತರ ಜೀವನ ಕಷ್ಟ ರೈತರಿಗೇ ಗೊತ್ತು.
ನಾರಾಯಣಯ್ಯ ಮತ್ತು ಸುಬ್ಬಮ್ಮರ ಆರೋಗ್ಯ ಮತ್ತಷ್ಟು ಹಾಳಾಗುತಲಿತ್ತು. ಡಾಕ್ಟರನ್ನು ಮನೆಗೇ ಕರೆಸಿದ. ಅವರು "ಆರೋಗ್ಯದ ಬಗ್ಗೆ ಹೇಳಲಾಗದು. ಇನ್ನು ಕೆಲವೇ ದಿನಗಳು. ನೆಂಟರಿಷ್ಟರನ್ನೆಲ್ಲಾ ಕರೆಸಿಬಿಡಿ ಎಂದರು. ವಿಷಯ ತಿಳಿದೊಡನೆಯೇ ಸುಬ್ರಹ್ಮಣ್ಯ ಮತ್ತು ಪುಷ್ಪವತಿ ತಮ್ಮ ಮಕ್ಕಳೊಡನೆ ಮನೆಯ ಕಡೆಗೆ ಧಾವಿಸಿದರು. ಆದರೇ, ವಯಸ್ಸಾದ ಹಿರಿಯ ಜೀವಗಳ ಕೊನೆಯ ದಿನಗಳವು, ಅಥವಾ ಕೊನೆಯ ಕೆಲ ಗಂಟೆಗಳೇ ಇರಬಹುದು. ಮೊಮ್ಮಕ್ಕಳ ಮುಖ ನೋಡಿದ್ದರಷ್ಟೇ, ನಾರಾಯಣಯ್ಯ ಮತ್ತು ಸುಬ್ಬಮ್ಮ ಇಬ್ಬರೂ ಒಟ್ಟಿಗೇ ಕೊನೆಯ ಉಸಿರನ್ನು ಬಿಟ್ಟರು. ಅವರಿಬ್ಬರ ಪ್ರಾಣಪಕ್ಷಿ ಒಟ್ಟಿಗೇ, ಜೊತೆ ಜೊತೆಯಾಗಿ ನೀಲಾಕಾಶದಲ್ಲಿ ಹಾರಿ ಕಾಣದ ಲೋಕಕ್ಕೆ ಪ್ರಯಾಣ ಬೆಳೆಸಿತ್ತು.
ಗಣೇಶನಿಗೆ ಕೊನೆಗಾಲದ ವರೆಗೂ ಅವರ ಸೇವೆ ಮಾಡಿದ ಸಂತೋಷ. ಆದರೇ, ಸುಬ್ರಹ್ಮಣ್ಯನಿಗೆ ವಯಸ್ಸಾದ ತಂದೆ ತಾಯಿಯ ಸೇವೆ ಮಾಡಲು ಆಗಲಿಲ್ಲವೆಂಬ ಬೇಸರ. ನೋವಿನಲ್ಲಿ ಇಬ್ಬರ ಕಣ್ಣಲ್ಲಿಯೂ ಕಣ್ಣೀರು ಒಸರಿತು. ಅಂತಿಮ ವಿಧಿ-ವಿಧಾನಗಳನ್ನ ಪೂರೈಸಿ ವೈಕುಂಠ ಸಮಾರಾಧನೆಯೂ ಆಯ್ತು. ಸುಬ್ರಹ್ಮಣ್ಯನೂ ತನ್ನ ಹೋಟೆಲ್ ಉದ್ಯಮವನ್ನು ಬಿಟ್ಟು ಹೆಚ್ಚು ದಿನ ಉಳಿಯುವಂತೆಯೂ ಇರಲಿಲ್ಲ. ಹಾಗಾಗಿ ಅವನೂ ದಾವಣಗೆರೆಗೆ ಹೊರಟ.
ಈಗ ಮನೆಯಲ್ಲವೂ ಖಾಲಿ ಖಾಲಿ. ಅಣ್ಣ ಸುಬ್ರಹ್ಮಣ್ಯನಿಲ್ಲ, ಅತ್ತಿಗೆಯೂ ಇಲ್ಲ. ಅವನ ಮಕ್ಕಳ ಮಾತುಗಳಿಲ್ಲ. ನಾರಾಯಣಯ್ಯನ ಕೋಪವಿಲ್ಲ. ಸುಬ್ಬಮ್ಮನ ಅಡಿಗೆಯ ಘಮವಿಲ್ಲ. ಏನೂ ಇಲ್ಲದೇ, ಮನೆಯಲ್ಲವೂ ಮೌನ. ಅತ್ತಕಡೆ ತೋಟ ಗದ್ದೆಯಲ್ಲಿ ಫಸಲೂ ಇಲ್ಲ.
ಈಗ ಗಣೇಶ ಇಡಿಯ ಮನೆಯಲ್ಲಿ ಏಕಾಂಗಿ. ಅವನಿಗೆ ಈಗ ಜೊತೆಯಾಗಿದ್ದೆಂದರೇ "ಪೀಟರ್". ಹೌದು ಜಿಮ್ಮಿಯೂ ವಯಸ್ಸಾಗಿ ಸತ್ತು, ಅದರ ಜಾಗವನ್ನು ಪೀಟರ್ ಎಂದೋ ಪಡೆದಾಗಿತ್ತು. ತೋಟದ ದಾರಿಯಲಿ ಪೀಟರ್ ಜೊತೆ ನೆಡೆಯುತ್ತಾ, ಗಣೇಶ ತನ್ನ ಒಬ್ಬಂಟಿತನದ ಬಗ್ಗೆ ನೆನೆಯುತ್ತಾ ಬೆಣ್ಣೆಗುಡ್ಡದ ಬಂಡೆಯ ಮೇಲೆ ಬಂದು ಕುಳಿತ. ಅಂದು ನಾರಾಯಣಯ್ಯ ಹೇಳಿದ "ಗಣೇಶ, ಕೊನೆಗಾಲದಲ್ಲಿ ನಿನಗೆ ಆಗುವುದು ನಿನ್ನ ಮಕ್ಕಳೇ ಹೊರತು, ಸುಬ್ರಹ್ಮಣ್ಯನ ಮಕ್ಕಳ್ಳಲ್ಲ. ಕೊನೆಗಾಲದಲ್ಲಿ ನಿನಗೆ ಜೊತೆಗಾತಿ ನಿನ್ನ ಮಡದಿ. ಮದುವೆಯಾಗು." ಎಂಬ ಮಾತುಗಳು ಕಿವಿಯಲ್ಲಿ ಗುನುಗುಟ್ಟುತ್ತಿದ್ದವು.
ಪಶ್ಚಿಮ ದಿಗಂತದಂಚಿನಲಿ ಸೂರ್ಯನು ಅಸ್ತಂಗತವಾಗುವುದನ್ನು ಕಂಡ ಗಣೇಶನಿಗೆ, ನೆನಪಿನ ಪುಸ್ತಕದಲ್ಲಿ, ತನ್ನ ಜೀವನದ ಏರು-ಪೇರುಗಳ ಪುಟಗಳು ತಿರುವಾಕುತ್ತಿದ್ದವು. ಅವೆಲ್ಲವನ್ನೂ ನೆನೆಯುತ್ತಾ ಗಣೇಶ ಒಂದು ಕ್ಷಣ ಆಲೋಚನಾ ಮಗ್ನನಾಗಿದ್ದು ಸುಳ್ಳಲ್ಲ. ಸೂರ್ಯಾಸ್ಥದ ನಂತರ ಸುತ್ತಲೂ ಆವರಿಸಿದ ಕತ್ತಲು ಅವನ ಜೀವನದ ತುಂಬ ಈಗ ಆವರಿಸಿದ ಕತ್ತಲಿನಂತೆಯೇ ಕಂಡಿತು.
ಅವರವರ ಜೀವನಕ್ಕೆ, ಅವರವರ ದೃಷ್ಟಿಯಿಂದ ನೋಡಿದರೆ ಎಲ್ಲರೂ ಸರಿಯೇ. ತನ್ನ ಮಕ್ಕಳ ಏಳಿಗೆಗೆಂದು ಸುಬ್ರಹ್ಮಣ್ಯ ಊರು ಬಿಟ್ಟಿದ್ದು ತಪ್ಪು ಅಲ್ಲವೇ ಅಲ್ಲ.
ಆದರೇ, ಕೊನೆವರೆಗೂ ಮದುವೆಯಾಗದೇ, ತನ್ನ ಹೆತ್ತ ತಂದೆ ತಾಯಿಯ ಸೇವೆಗೆಂದೇ ಜೀವನ ಮುಡಿಪಾಗಿರಿಸಿ, ತನ್ನವರಿಗಾಗೇ ತನ್ನ ಸುಖವನ್ನೆಲ್ಲಾ ತ್ಯಜಿಸಿ, ತನ್ನವರ ಬದುಕಿಗಾಗೇ ದುಡಿದ ಗಣೇಶ "ತ್ಯಾಗಿ" ಅಲ್ಲದೇ ಇನ್ನೇನು???
(ಶುಭಂ)
- ಕೆ. ಸಿ. ಪಿ. ಕಾರಂತ್
ಕಮ್ಮರಡಿ
(ಚಿತ್ರ: ಅರುಣ್ )
ಬರವಣಿಗೆ ನನ್ನ ಹವ್ಯಾಸ. ಒಂದು ಕಥೆ ಎಂದರೆ ಅದರ ಹಿಂದೆ ಬಹಳ ದಿನಗಳ ಶ್ರಮವಿರುತ್ತದೆ. ಈ ಎಲ್ಲ ಕಥೆಗಳ ಸರಿ ತಪ್ಪುಗಳ ನಿರ್ಧರಿಸಬೇಕಾದವರು ನೀವುಗಳು. ಆದಕಾರಣ, ದಯಮಾಡಿ ನಿಮ್ಮ ಅತ್ಯಮೂಲ್ಯ ಸಲಹೆಗಳನ್ನು ನೀಡಿ, ಇತರರಿಗೆ ಈ ಕಥೆಗಳನ್ನು ಹಂಚಿ, ಅವರೂ ಕನ್ನಡವ ಓದುವ ಹವ್ಯಾಸ ಬೆಳೆಸಲು ಸಹಕರಿಸಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ.




Adbhuta baravanige nimage danyavadagalu
ReplyDeleteTnk u Soo much 😊
Delete