"ತ್ಯಾಗಿ" ಭಾಗ - 2 "ಕಲ್ಲುಗುಡ್ಡೆಯ ಜಾಡು ಹಿಡಿದು"
"ತ್ಯಾಗಿ"
ತನ್ನವರಿಗಾಗಿ ತನ್ನದೆಲ್ಲವ ತೊರೆದವನು...!!!
ಭಾಗ - 2
"ಕಲ್ಲುಗುಡ್ಡೆಯ ಜಾಡು ಹಿಡಿದು"
(ಇದೊಂದು ಕಾಲ್ಪನಿಕ ಕಥೆಯಾಗಿದ್ದೂ, ಯಾವುದೇ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ್ದಲ್ಲ. ಹಾಗೂ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕಾತಾಳೀಯವಷ್ಟೇ.)
ಸುಬ್ರಹ್ಮಣ್ಯ ಮತ್ತು ಗಣೇಶ ಅಣ್ಣ -ತಮ್ಮ ಎಂದರೆ ಹೀಗಿರಬೇಕು ಎಂದು ಬೇರೆಯವರೆಲ್ಲಾ ಬೊಟ್ಟು ಮಾಡಿ ತೋರ್ಸೋ ತರ ಇದ್ದವರು. ಇಬ್ಬರಿಗೂ ವಿದ್ಯೆ ನೈವೇದ್ಯೆ ಆಗಿದ್ರಿಂದಾ, ವಂಶಪಾರಂಪರ್ಯವಾಗಿ ಬಂದ ವೃತ್ತಿಯನ್ನೇ ಮುಂದುವರೆಸಿದ್ರು. ಅದೇ ರೈತಾಪಿ ಜೀವನ - ರೈತಪಾಪಿ ಜೀವನ. ಅದ್ಯಾರು ಹೇಳಿದ್ರೋ, ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬೆಳೆದು, ಸಾಲದಲ್ಲೇ ಸಾಯ್ತಾರೆ ಎಂದು. ಹಾಗೆಯೇ ಇಂದಿಗೂ ಇರುವುದು ಸುಳ್ಳಲ್ಲ. ರೈತರು ಮಾತ್ರವಲ್ಲದೇ, ಭಾರತದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ ಈಗ ಇದೇ ಪರಿಸ್ಥಿತಿ.
ಸುಭ್ರಹ್ಮಣ್ಯನಿಗೋ ಮದುವೆಯ ವಯಸ್ಸು ಮೀರ್ತಾ ಇತ್ತು. ನಾರಾಯಣಯ್ಯನದೋ ಒಂದೇ ಹಠ, ಏನಾದರೂ ಮಾಡಿ ಮಗನ ಮದುವೆ ಮಾಡಲೇಬೇಕು ಎಂದು ಹರಕೆ ಹೊತ್ತಿದ್ದರು. ಗಣೇಶನಿಗೋ ಅಣ್ಣನ ಮದುವೆಯಾದ್ರೇ ಮುಂದಿನದು ಇವನದೇ ಎಂಬ ಆಸೆ. ಸುಬ್ರಹ್ಮಣ್ಯನ ಜಾತಕ ಹೊರಡಿಸಿಬಿಟ್ಟರು.
ಅಲ್ಲಾ, ಈ ಕಾಡುತೋಟವೆಂಬ ಅಕ್ಷರಶಃ ಕಾಡುಕೊಂಪೆಯಲ್ಲಿ ಇರುವ ಈ ಕಾಡು ಮನುಷ್ಯನಿಗೆ ಹೆಣ್ಣು ಕೊಡುವವರ್ಯಾರು? ಆದರೇ, ಆಗ ಕಾಲವೂ ಹಾಗೇ ಇತ್ತೆನ್ನಿ. ಈಗಿನ ಹುಡುಗಿಯರ ತರಹ, ನಮಗೇ ಸಾಪ್ಟವೇರ್ ಗಂಡನೇ ಬೇಕು, ತಿಂಗ್ಳಿಗೆ 1 ಲಕ್ಷ ಸಂಬಳ, ಸ್ವಂತ ಮನೆ, ಕಾರು ಇರಬೇಕು ಮತ್ತೆ ಮುಖ್ಯವಾಗಿ ಅತ್ತೆ ಮಾವ ನಮ್ಮಜೊತೆ ಇರಬಾರ್ದು ಎಂದೆಲ್ಲಾ ಕಂಡೀಶನ್ ಹಾಕುತ್ತಿರಲಿಲ್ಲ. ಅಲ್ಲಾ ಹುಡುಗರೂ ಏನ್ ಕಮ್ಮಿ? ಹುಡುಗಿ ನೋಡಲು ಸುಂದರವಾಗಿರಬೇಕು, ಕೆಲಸಕ್ಕೂ ಹೋಗಿ, ಮನೆಕೆಲಸವನ್ನೂ ಮಾಡಬೇಕು ಎಂದರೇ? ಆದ್ರೇ ಆಗೆಲ್ಲಾ ಹೀಗಿರಲಿಲ್ಲ ಮತ್ತೆ ಎಲ್ಲರದೂ ಕಷ್ಟದ ಬದುಕೇ ಆಗಿದ್ರಿಂದಾ ಕಂಡೀಷನ್ ಗಳೂ ಹಾಕುತ್ತಿರಲಿಲ್ಲ. ಬಡತನ ಹೇಗಿತ್ತೆಂದರೇ, ಹೆಣ್ಣು ಹುಟ್ಟಿದರೆ ಮದುವೆ ಮಾಡಬೇಕಲ್ಲಾ ಎಂದು ಯೋಚನೆಯಾಗಿರ್ತಾ ಇತ್ತು. ಅಷ್ಟಲ್ಲದೆಯೇ ಹೇಳ್ತಾರೇನು ಹೆಣ್ಣು ಹೆತ್ತವರ ಕಷ್ಟ ನಿಮಗೇನು ಗೊತ್ತು ? ಎಂದು.
ಕಷ್ಟವಾದ್ರೂ ನಮ್ಮ ನಾರಾಯಣಯ್ಯ ಗೊತ್ತಲ್ಲ, ಬಿಡುವ ಜಾಯಮಾನದವರಲ್ಲ. ಸುಬ್ರಹ್ಮಣ್ಯನ ಜಾತಕಕ್ಕೆ ಸರಿಹೊಂದುವ ಹುಡುಗಿ ಅದ್ಯಾವ ಪಾತಾಳಲೋಕದಲ್ಲೇ ಅಡಗಿರಲಿ, ಅಲ್ಲಿಯೂ ಹೋಗಿ, ತಲಾಷ್ ಮಾಡಿ, ಅವಳನ್ನು ತಂದು, ಸುಬ್ರಹ್ಮಣ್ಯನಿಗೆ ಗಂಟು ಹಾಕಿಯೇ ತೀರುತ್ತೇನೆ ಎಂದು ಶಪಥ ಮಾಡಿದಂತೆ ತೋರುತ್ತದೆ. ಇಲ್ಲದಿದ್ದರೇ ಶೃಂಗೇರಿಯಿಂದ 15 ಕಿಲೋಮೀಟರ್ ದೂರದಲ್ಲಿರೋ ಅದ್ಯಾವುದೋ ಕಲ್ಲುಗುಡ್ಡೆಯ ಸೂರಯ್ಯನ ಮನೆಯಬಗ್ಗೆ ತಿಳಿದಿದ್ದಾದರೂ ಹೇಗೆ? ಕಮ್ಮರಡಿಯ ಜಾತ್ರೆಯಲ್ಲಿ ನರಸಿಂಹಯ್ಯ, ಸೂರಯ್ಯನ ಮನೆಯಲ್ಲಿ ಮದುವೆಗೆ ಹುಡುಗಿಯಿದ್ದಾಳೆ ಎಂದು ಹೇಳಿದ್ದೇ ತಡ, ಮಾರನೇ ದಿನವೇ ನಾರಾಯಣಯ್ಯ ಅತ್ತಕಡೆ ಹೊರಟಿದ್ದಾಯ್ತು.
ಆ ಕಲ್ಲುಗುಡ್ಡೆಯೋ, ಅಲ್ಲಿಗೆ ಕಾಡುತೋಟಕ್ಕೆ ಇರುವಂತೆ ಬಸ್ಸಿನ ವ್ಯವಸ್ಥೆಯೂ ಇಲ್ಲ. ಸೂರಯ್ಯನ ಮನೆ ತಲುಪಲು ಸುಮಾರು 5 ಕಿಲೋಮೀಟರ್ ನೆಡೆದೇ ಸಾಗಬೇಕು. ನಾರಾಯಣಯ್ಯ ಎಂಥಾ ಗಟ್ಟಿ ಜೀವ ಎಂದು ಹೇಳಿದ್ನಲ್ಲಾ. ಈ 60 ರ ವಯಸ್ಸಿನಲ್ಲೇ ಹೀಗಿದ್ದಾರೆಂದರೇ, ಹರೆಯದಲ್ಲಿ ಹೇಗಿದ್ದಿರಬಹುದು? ಅಂಥಾ ಗಟ್ಟಿಗರಲ್ಲದಿದ್ದರೇ ಆ ಕಲ್ಲುಗುಡ್ಡೆಯ ದುರ್ಗಮ ಹಾದಿಯಲ್ಲಿ ಸಾಗುವುದು ಕಷ್ಟಸಾಧ್ಯವೇ. ಅಲ್ಲದೇ ಆಗಿನ ಜನರೆಲ್ಲಾ ಗಟ್ಟಿಗರೇ, ಈಗಿನವರಿಗೆ 2 ಕಿಲೋಮೀಟರ್ ರಸ್ತೆಯಲ್ಲಿ ನೆಡೆಯುವಾಗಲೇ ಉಸಿರುಕಟ್ಟಿ, ತಲೆ ತಿರುಗಿ ಬಿದ್ದಿರುತ್ತಾರೆ. ಇನ್ನು 5 ಕಲೋಮೀಟರು, ಅದೂ ಕಾಡಿನ ಹಾದಿಯೆಂದರೇ ಕನಸಿನ ಮಾತೇ.
ನಾರಾಯಣಯ್ಯ, ಸೂರಯ್ಯನ ಮನೆ ತಲುಪುವಾಗಲೇ ದಿಗಂತದ ಅಂಚಿನಲ್ಲಿ ಸೂರ್ಯಾಸ್ತವಾಗಿ, ಕತ್ತಲಾಗುತ್ತಾ ಬಂದಿತ್ತು. ಸುತ್ತಲೂ ಬಿಬ್ಬಿರಿಗಳು ಬೀರ್... ಬೀರ್... ಎಂದು ಸದ್ದು ಮಾಡುತ್ತಾ ರಾತ್ರಿಯ ಕತ್ತಲನ್ನು ಕರೆಯುತ್ತಿದ್ದವು. ಸೂರಯ್ಯನವರ ಬಳಿ ನಾರಾಯಣಯ್ಯ, ಬಂದ ವಿಷಯವನ್ನೆಲ್ಲಾ ಸುವಿಸ್ತಾರವಾಗಿ ಹೇಳಿದರು.
ಈ ಸೂರಯ್ಯನವರೂ ಏನು ಸಾಮನ್ಯದವರಲ್ಲ. ಸ್ವಲ್ಪದ ಹಠದ ಸ್ವಭಾವದವರೇ. ಪೂರ್ಣ ನಾಮಧೇಯ ಸೂರ್ಯನಾರಾಯಣ. ಅವರಿಗೆ 4 ಹೆಣ್ಣುಮಕ್ಕಳು. ಹಾಗೆಂದು ಸೂರಯ್ಯ ಎಂದೂ ತಲೆ ಕೆಡಿಸಿಕೊಂಡವರಲ್ಲ. "ಮದುವೆ ಆಗದಿದ್ರೇ ಏನಂತೇ, ನಾನೇ ಸಾಕ್ತೀನಿ" ಎಂದು ಸಿಟ್ಟಿನಲಿ ಹೇಳಿದ್ದೂ ಇದೆ. ಮೊದಲ ಮಗಳನ್ನು ಸಾಗರಕ್ಕೆ ಎರಡನೆಯವಳನು ಶಿವಮೊಗ್ಗಕೆ ಮದುವೆ ಮಾಡಿ ಕಳಿಸಿದ್ದರು. ಆ ಗಂಡುಗಳು ಇವರ ಇರುವಿಕೆಯನ್ನು ಅದೇಗೆ ಗುರುತಿಸಿದರೋ? ಅದೇಗೆ ಅವರ ಮನೆಯ ದಾರಿ ಹುಡುಕಿ ಬಂದರೋ? ಅವರಿಗೇ ಗೊತ್ತು. 'ಋಣಾನುಬಂಧ ರೂಪೇಣು ಪಶು, ಪತ್ನಿ, ಸುತಾಲಯ' ಎಂದು ಸುಮ್ಮನೇ ಹೇಳ್ತಾರೇನು?
ನಾರಾಯಣಯ್ಯನವರು, 'ನಮ್ಮದು ಕಾಡುತೋಟವಾಗ್ತದೆ, ತೀರ್ಥಹಳ್ಳಿ ಬಳಿಯ ರುದ್ರಪಾದದಿಂದ ಎರಡೇ ಕಿಲೋಮೀಟರ್. ನಮ್ಮದು ರೈತಾಪಿ ಕುಟುಂಬ.' ಎಂದೆಲ್ಲಾ ಹೇಳ್ತಾ ಇರಬೇಕಾದರೇ, ಸೂರಯ್ಯ ತನ್ನ ಮೊದಲೆರಡು ಮಕ್ಕಳ ಮನೆಗಳ ನೆನೆದು ಯೋಚನಾಮಗ್ನರಾದರು. ಕಾರಣ ಅವರಿಬ್ಬರನ್ನೂ ಅಂತಹಾ ಶ್ರೀಮಂತ ಮನೆಗೇ ಕನ್ಯಾದಾನ ಮಾಡಿದ್ದರು ಸೂರಯ್ಯ. ಹಾಗೆಂದು ಬಂದ ಸಂಬಂಧವನ್ನು ದೂರ ಮಾಡುವಂತೆಯೂ ಇರಲಿಲ್ಲ.
ಸೂರಯ್ಯನ ಮೂರನೇ ಮಗಳು 'ಪುಷ್ಪವತಿ'. ಅವಳೂ ಅಷ್ಟೇನು ಓದಿದವಳಲ್ಲ. 5ನೇ ತರಗತಿಗೇ, ಶಾಲೆಗೆ ಧೀರ್ಘದಂಡ ನಮಸ್ಕಾರವನ್ನು ಹಾಕಿ, ಮನೆಯಲ್ಲೇ 'ರಾಧಮ್ಮ'ನ ಜೊತೆ ಮನೆಗೆಲಸ ಮಾಡಿಕೊಂಡಿದ್ದಳು. ಪುಷ್ಪವತಿಗೆ ಕೃಷಿಯಲ್ಲಿ ಗೊತ್ತಿರದ ಕೆಲಸವಿರಲಿಲ್ಲ. ಅಡಿಕೆ ಮರ ಹತ್ತಿ ಔಷಧಿ ಹೊಡೆಯೋದು, ಕೊನೆ ಕೊಯ್ಯೋದು ಬಿಟ್ಟರೆ, ಬೇರೆ ಎಲ್ಲಾ ಕೆಲಸವೂ ಕರಗತ. ಯಾವ ರೀತಿಯಿಂದ ನೋಡಿದರೂ ಪುಷ್ಪ, ನಾರಾಯಣಯ್ಯನ ಮನೆಗೆ ತಕ್ಕಸೊಸೆ.
ರಾಧಮ್ಮರಿಗೂ ಅದೇ ಕಂಡಿರಬೇಕು. ಅಂದಹಾಗೆ, ರಾಧಮ್ಮ, ಸೂರಯ್ಯನ ಮಡದಿಯೆಂದು ಹೇಳಲು ಮರೆತಿದ್ದೆ. ಎಲ್ಲರದೂ ರಾತ್ರಿಯ ಭೋಜನವಾಯ್ತು. ಕತ್ತಲೆಯಲ್ಲಿ ಹೋಗುವುದೆಲ್ಲಿಗೆ ಎಂದು ನಾರಾಯಣಯ್ಯರನ್ನು ಅಲ್ಲೇ ಉಳಿಯಲು ಸೂರಯ್ಯ ಹೇಳಿದ್ದರಿಂದ, ಅವರೂ ಅಲ್ಲೇ ಉಳಿದಿದ್ದರು. ನಾರಾಯಣಯ್ಯ ಮದುವೆಯ ವಿಷಯ ಪ್ರಸ್ತಾಪ ಮಡಿದ್ದರೂ, ಸೂರಯ್ಯ ಇನ್ನೂ ಯಾವ ಉತ್ತರವನ್ನೂ ಕೊಟ್ಟಿರಲಿಲ್ಲ.
ಅಂದೇ ರಾತ್ರಿ ರಾಧಮ್ಮ, ಸೂರಯ್ಯರಿಗೆ ವೀಳೆಯನ್ನು ನೀಡುತ್ತಾ, ''ನಮ್ಮ ಪುಷ್ಪಳಿಗೆ ಈಗಾಗಲೇ 18 ದಾಟಿತು, ಇನ್ನು ತಡ ಮಾಡುವುದು ಸರಿಯಲ್ಲ. ಅಲ್ಲದೇ ಅವಳ ವಿಧ್ಯಾಭ್ಯಾಸವೂ ಅಷ್ಟಕ್ಕಷ್ಟೇ. ನನಗೇನೋ ಈ ಸಂಬಂಧ ಆಗಬಹುದು ಎಂದು ಕಾಣುತ್ತದೆ" ಎಂದಳು.
ಸೂರಯ್ಯನೂ ಅವಳು ಹೇಳಿದ್ದು ಸರಿ ಎನ್ನುವಂತೆ ತಲೆಯಾಡಿಸಿ "ಹ್ಞೂಂ, ಒಂದು ಮಾತು ಅವಳನ್ನೂ ಕೇಳು" ಎಂದು ಅಲ್ಲೇ ಮಗ್ಗುಲು ತಿರುಗಿ ಮಲಗಿದರು.
ಮಾರನೆಯ ದಿನ ಬೆಳಗಿನ ಸೂರ್ಯ ತನ್ನ ರಷ್ಮಿಯ ಹೊರ ಕಳಿಸುವ ಮೊದಲೇ ನಾರಾಯಣಯ್ಯ ಎದ್ದು, ಓಗಂದೆಯ ನೀರಿನಲಿ ಮುಖವನು ತೊಳೆದು, ನಿತ್ಯಕರ್ಮವನ್ನೂ ಅವರ ಮನೆಯಲ್ಲಿಯೇ ಮುಗಿಸಿದರು. ಅಷ್ಟೊತ್ತಿಗೆ ಸೂರಯ್ಯನವರೂ ಜಗುಲಿಗೆ ಹೊಗೆಸೊಪ್ಪು ನುರಿಯುತ್ತಾ ಬಂದರು. ಅದಾಗಲೇ ರಾಧಮ್ಮ ಮಗಳನ್ನು ಕೇಳಿ ಒಪ್ಪಿಸಿದ್ದರು ಎಂದು ಕಾಣುತ್ತದೆ. ನಾರಾಣಯ್ಯನವರ ಬಳಿ ಸೂರಯ್ಯ ವಿಷಯ ಪ್ರಸ್ತಾಪಿಸಿ "ನಮಗೆ ಒಪ್ಪಿಗೆ ಇದೆ, ಮುಂದುವರೆಯಬಹುದು.." ಎಂದಾಗ ನಾರಾಯಣಯ್ಯನವರ ಮೊಗದಲ್ಲಿ ಒಂದು ಕಿರುನಗೆ ಮೂಡಿತು.
(ಮುಂದುವರೆಯುವುದು...........)
-ಕೆ. ಸಿ. ಪಿ. ಕಾರಂತ್
ಕಮ್ಮರಡಿ
(ಚಿತ್ರ: ಅರುಣ್)



This comment has been removed by the author.
ReplyDeleteHemmeya kannada
ReplyDelete✌
Delete