ನಾ ಕಂಡಂತೆ ನನ್ನೂರು ಭಾಗ - 3
"ನಮ್ಮೂರ ಗಣಪ"
ನಿಗೆ ಷಷ್ಠಿಪೂರ್ತಿ...!!!
"ಗಜಮುಖನೇ ಗಣಪತಿಯೇ ನಿನಗೆ ವಂದನೇ, ನಂಬಿದವರ ಪಾಲಿನಾ ಕಲ್ಪತರು ನೀನೇ...." ಭಾದ್ರಪದ ಶುಕ್ಲ ಚೌತಿಯಾ ದಿನ ಕಮ್ಮರಡಿ ವೇದಮಂದಿರದಲ್ಲಿ ಕಟ್ಟಿದ ಸ್ಪೀಕರ್ ನಿಂದ ಈ ಹಾಡು ಬಂತು ಅಂದ್ರೇ 'ವಿದ್ಯಾ ಗಣಪತಿ' ಸಂಘದ ಗಣಪತಿ ಪ್ರತಿಷ್ಟಾಪನೆ ಪ್ರಾರಂಭವಾಯಿತು ಅಂತ. ಪ್ರತೀ ವರ್ಷ ಭಿನ್ನ-ವಿಭಿನ್ನ ಮಂಟಪಗಳನ್ನು ಮಾಡಿ ಅದರಲ್ಲಿ ಸಂಘದ ಗಣಪತಿಯ ಕೂರಿಸುವುದು ವಾಡಿಕೆ. ಅಲ್ಲದೇ ರಾತ್ರಿಯಾದರೇ ಇಡೀ ವೇದಮಂದಿರ ಬಣ್ಣ ಬಣ್ಣದ ವಿದ್ಯುತ್ತ್ದೀಪಗಳಿಂದ ಜಗಜಗಿಸುತ್ತಿರುತ್ತದೆ.
ನಾನು ಹುಟ್ಟಿದ ಮೇಲೆ ನನಗೆ ಇದು 21ನೆಯ ಗಣಪತಿ ಹಬ್ಬವಾದರೂ, ನಮ್ಮೂರ ವಿದ್ಯಾಗಣಪತಿ ಸಂಘಕ್ಕೆ ಇದು 60ನೆಯ ಸಂಭ್ರಮ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಹಿಂದೂ ಗಳ ಒಗ್ಗಟ್ಟಿಗಾಗಿ ಶ್ರೀ ' ಬಾಲಗಂಗಾಧರ ತಿಲಕ'ರು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಿದರು. ಆದರೆ ಕಮ್ಮರಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಪಾರಂಭವಾಗಿದ್ದು 1957ರಲ್ಲಿ, "ಶ್ರೀ ವಿದ್ಯಾ ಗಣಪತಿ ಸೇವಾ ಸಂಘ" ವೆಂಬ ಅನ್ವರ್ಥದೊಂದಿಗೆ. 1982 ರಲ್ಲಿ 'ಬೆಳ್ಳಿಹಬ್ಬ', 2007 ರಲ್ಲಿ 'ಸುವರ್ಣ ಮಹೋತ್ಸವ', ಈಗ 2017 ರಲ್ಲಿ 60ನೆಯ ವರುಷದ ಸಂಭ್ರಮದ ಗಣೇಶೋತ್ಸವ.
ಹೆಸರೇ ಹೇಳುವಂತೆ ಕಮ್ಮರಡಿ ಜನತೆಗೆ ಇದೊಂದು ಉತ್ಸವದಂತೆ. ಕಲಾ ಪೋಷಕರಾದ ಕಮ್ಮರಡಿಯ ಜನತೆ ಸಂಘದ ಪ್ರಾರಂಭದಿಂದ ಪ್ರತೀ ವರ್ಷವೂ ಊರಿನವರೇ ನಾಟಕಗಳನ್ನು ಅಭಿನಯಿಸುತ್ತಿದ್ದರು. ಹಿರಿಯರಾದ ಶ್ರೀ ಉಮೇಶ್ ಕಾಸರವಳ್ಳಿ, ಮುರಳಿ ಜೋಯಿಸ್, ಶ್ರೀಪಾದ ಜೋಯಿಸ್ ರವರ ನಾಟಕಗಳನ್ನು ನಾನು ಕಣ್ಣಾರೆ ನೋಡಿಲ್ಲವಾದರೂ, ಅವರ ಶಿಶ್ಯನಾಗಿ ಅವರ ಅಭಿನಯವನ್ನು ನಾನು ಬಲ್ಲೆ. ನಾನೊಬ್ಬನೇ ಅಲ್ಲ, ನನ್ನ ತಂದೆಯವರೂ ಸಹ ನಾಟಕ ಕಲಾವಿದರೇ. 'ರಣಧೀರ ಕಂಠೀರವ ನರಸರಾಜ ಒಡೆಯರ್' ಸೇರಿದಂತೆ ಅನೇಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ನಾನೂ ಶ್ರೀ ಕೃಷ್ಣ ದೇವರಾಯ, ಸತ್ಯ ಹರಿಶ್ಚಂದ್ರ, ಇತ್ಯಾದಿ ಪೌರಾಣಿಕ, ಐತಿಹಾಸಿಕ ಹಾಗೂ ಹಲವು ಸಾಮಾಜಿಕ ನಾಟಕಗಳನ್ನು ಮಾಡಿದ್ದೇನೆ. ಗುರುಗಳಾದ ಉಮೇಶ್ ಕಾಸರವಳ್ಳಿ, ಮುರಳಿ ಜೋಯಿಸ್, ಶ್ರೀಪಾದ ಜೋಯಿಸ್ ರವರುಗಳ ನಿರ್ದೇಶನದಲ್ಲಿ ಮೂಡಿಬಂದ "ಟೀಪು ಸುಲ್ತಾನ" ನಾಟಕ ನೆರೆದಿದ್ದ ಹಲವರ ಕಣ್ಣಂಚಲಿ ಕಣ್ಣೀರು ತರಿಸಿದ್ದು ಸುಳ್ಳಲ್ಲ. ಅದೇ ನಾಟಕವನ್ನು ಏಕಪಾತ್ರಾಭಿನಯವಾಗಿಸಿ, ನಟಿಸಿ 'ರಾಜ್ಯ ಮಟ್ಟದ'ಲ್ಲಿ ಪ್ರಶಸ್ತಿ ಪಡೆದೆ. ಇವಷ್ಟೇ ಅಲ್ಲದೇ, ಶಮಂತಕೋಪಖ್ಯಾನ, ಧರ್ಮಸ್ಥಳ ಯಶೋಗಾಥೆ, ಶ್ರೀಮದ್ ಭಗವತ್ಗೀತಾ ತಾತ್ಪರ್ಯ, ಶ್ರೀ ರಾಮ ಪಟ್ಟಾಭಿಷೇಕ ವೆಂಬ ರೂಪಕಗಳನ್ನೂ ಅಭಿನಯಿಸಿದ್ದೇನೆ. ಇಂತಹಾ ಕಲಾವಿದರನ್ನು ಗುರುಗಳಾಗಿ ಪಡೆದ ನಾನು ಧನ್ಯ.
ಕಮ್ಮರಡಿ ಹಿಂದಿನಿಂಲೂ ಅನೇಕ ಕಲಾವಿದರನ್ನು ಕರ್ನಾಟಕಕ್ಕೆ ಪರಿಚಯಿಸಿದೆ. ಕನ್ನಡ ಚಿತ್ರರಂಗಕ್ಕೆ ಅನೇಕ ಸ್ವರ್ಣಕಮಲ ಗಳನ್ನು, ರಾಷ್ಟ್ರ ಪ್ರಶಸ್ತಿ ಗಳನ್ನೂ ತಂದುಕೊಟ್ಟ 'ಗಿರೀಶ್ ಕಾಸರವಳ್ಳಿ' ನಮ್ಮೂರಿನವರು. ಅಲ್ಲದೇ ಇತ್ತೀಚೆಗೆ ಬಂದ 'ಜೋಷ್' ಚಿತ್ರದ ಖ್ಯಾತಿಯ 'ರಾಕೇಶ್ ಅಡಿಗ' ಕಮ್ಮರಡಿಯವರು. ಇನ್ನು 'ಕಿರಿಕ್ ಪಾರ್ಟಿ'ಯ ಕಿರಿಕ್ ಲೆಚ್ಚರ್ 'ರಾಘು ರಾಮನಕೊಪ್ಪ' ಅವರೂ ಕಮ್ಮರಡಿಯವರು. ಕಿರುಚಿತ್ರಗಳಿಂದಲೇ, ಹೆಸರು ಮಾಡಿರುವ 'ನವನ್ ಶ್ರೀನಿವಾಸ್' ಅವರೂ ಕಮ್ಮರಡಿಯವರೇ. ಜೊತೆಗೆ ತೆರೆಮರೆಯ ಕಲಾವಿದರೂ ಅನೇಕರಿದ್ದಾರೆ.
ಕಮ್ಮರಡಿ ಜನತೆಯ ಕಲೆ ಮತ್ತು ಕಲಾಪ್ರೇಮ ಸಂಘದ ಕಾರ್ಯದಲ್ಲಿ ಕಾಣಿಸುತ್ತಿತ್ತು. 1957 ರಿಂದಲೂ ಪ್ರತೀ ವರ್ಷ ಭಿನ್ನ ವಿಭಿನ್ನ ಮಂಟಪಗಳನ್ನು ಸಂಘದ ಪದಾದಿಕಾರಿಗಳು ಮಾಡಿಕೊಂಡು ಬಂದಿದ್ದಾರೆ. ನಾನೂ ಹಲವಾರು ಕರಕುಶಲ ಕೆಲಸಗಳನ್ನು ಈ ಮಂಟಪ ಕಟ್ಟುವಾಗ ಕಲಿತಿದ್ದೇನೆ.
ಆಗೆಲ್ಲಾ ನಮಗೆ ಗಣಪತಿ ಹಬ್ಬದ ಸಂಭ್ರಮ ಸುಮಾರು 15 ದಿನಗಳ ಮುಂಚೆಯೇ ಪ್ರಾರಂಭ ಆಗ್ತಾ ಇತ್ತು. ಕಾರಣ ನಾವೂ ಗಣಪತಿ ಮಂಟಪ ಕಟ್ಟಲು ಕೈಜೋಡಿಸ್ತಾ ಇದ್ದೆವು. ಸಾಮಾನ್ಯ ನನಗೆ ತಿಳಿದಂತೆ ನನ್ನ 3ನೇ ತರಗತಿಯಿಂದಾ ಅವರೊಡನೆ ಕೆಲಸ ಮಾಡುತ್ತಾ ಬಂದಿದ್ದೇನೆ. 'ಸಾಸಿವೆ ಮಂಟಪ', 'ಅರಣ್ಯ ಮಂಟಪ', 'ಕುಂದಾದ್ರಿ ಮಂಟಪ', 'ಗೀತೋಪದೇಶ ಮಂಟಪ', 'ಕಾರ್ಗಿಲ್ ವಿಜಯ ಮಂಟಪ', 'ವಿದ್ಯುತ್ ದಿಪಾಲಂಕಾರ ಮಂಟಪ', 'ಅಡಕೆ ಕೊಳೆರೋಗ ಮಂಟಪ', ಹೀಗೆ ಅನೇಕ ತರಹದ ಮಂಟಪಗಳನ್ನು 'ವೇದ ಮಂದಿರ'ದ ಒಂದು ಭಾಗದಲ್ಲಿ ನಿರ್ಮಿಸಿ ಗಜಾನನ ನನ್ನು ಪೂಜಿಸುವುದು ವಾಡಿಕೆ. 2007ರ ಸುವರ್ಣ ಮಹೋತ್ಸವಕ್ಕಂತೂ ಇಡೀ ವೇದಮಂದಿರವನ್ನು ಮೈಸೂರು ಅರಮನೆಯಂತೆ ಮಾಡಿದ್ದೆವು. 30 ಅಡಿ ಎತ್ತರದ "ದರ್ಬಾರ್ ಗಣಪ"ನ ಕೂರಿಸಿದ್ದು ನೆನಪಿದೆ. ಆ ಅರಮನೆಯ ಕೆಲಸಕ್ಕೆ ನಾನು ಮತ್ತು ನನ್ನ ಗೆಳೆಯರಾದ ವಿದ್ಯಾಶಂಕರ, ತೇಜ ಶಂಕರ, ಅಜಯ್, ಅಕ್ಷಯ್, ವರುಣ, ಶಶಾಂಕ ಹೀಗೆ ಸುಮಾರು ಜನ ಕೆಲಸ ಮಾಡಲು ಹೋಗ್ತಿದ್ವಿ.
ಯಾವಾಗ್ಲೂ 10 ದಿನ ಗಣಪತಿ ಕೂರಿಸಿ, ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸುತ್ತಾ ಬಂದಿದ್ದಾರೆ. 50ನೇ ವರ್ಷದ ಕಾರ್ಯಕ್ರಮಗಳನ್ನು 30ದಿನ ನೆಡೆಸಿದರು. ಸುತ್ತಮುತ್ತಲಿನ ಎಲ್ಲಾ ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಕಲ್ಪಿಸಿದ್ದಾರೆ. ಅಲ್ಲದೇ ಒಂದು ದಿನ ಗಣಹೋಮವನ್ನ ನೆಡೆಸಿ, ಸುತ್ತಮುತ್ತಲಿನ ಊರಿನ ಎಲ್ಲರಿಗೂ ಪ್ರಸಾದ ಭೋಜನದ ವ್ಯವಸ್ಥೆಯೂ ಇರುತ್ತದೆ. ಕೊನೆಯ ದಿನ ಅದ್ದೂರಿ ಆರ್ಕೆಷ್ಟ್ರಾ ಜೊತೆಗೆ ಕಮ್ಮರಡಿಯ ರಾಜಬೀದಿಯಲ್ಲಿ ಉತ್ಸವ ಮಾಡಿ, ಗಣಪತಿಯ ವಿಸರ್ಜನೆ. ಕೊನೆಯ ದಿನದ ಆರ್ಕೆಷ್ಟ್ರಾ ನೊಡೋದೇ ಒಂದು ಮಜ.
ಗಣಪತಿ ಹಬ್ಬ ಹತ್ತಿರ ಆಗ್ತಾ ಇದ್ದಹಾಗೆ, ಒಂದು ಸಭೆ ಕರೆದು ಸಂಘದ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿಯನ್ನು ಕೊಡಲಾಗತ್ತೆ. ಸದಸ್ಯರೂ ಕೊಟ್ಟ ಜವಾಬ್ದಾರಿಯನ್ನ ಸರಿಯಾಗಿ ನಿಭಾಯಿಸುತ್ತಾರೆ. ನನ್ನಪ್ಪನೂ ಈ ಸಂಘದಲಿ ಕೆಲಸ ಮಾಡಿದವರೇ.
ಇಂದಿನ ಸಮಾಜದಲ್ಲಿ, ಯಾವುದೇ ಕೆಲಸಕ್ಕಾದರೂ ಹಣ ಬೇಕು ಅಲ್ಲವೇ??? ಅದಕ್ಕೆಂದೇ ಸುತ್ತಮುತ್ತಲ ಊರುಗಳಿಗೆ ಕಲೆಕ್ಷನ್ ಹೋಗೊದೇ ಒಂದು ದೊಡ್ಡ ತಲೆಬಿಸಿಯ ಕೆಲಸ. ಆದರೇ, ಸಂಘದ ಸದಸ್ಯರು ಯಾವಾತ್ತೂ, ಯಾರನ್ನೂ ಒತ್ತಾಯ ಮಾಡಿ ಹಣ ಪಡೆದವರಲ್ಲ. ಸೌಮ್ಯವಾಗಿ ಕೊಟ್ಟ ಹಣವನ್ನು ವಿನಮ್ರತೆಯಿಂದ ಪಡೆದು ರಸೀತಿ ಕೈಮೇಲೆ ಇಟ್ಟವರು. ಆಗೆಲ್ಲಾ ರಾಮಕೃಷ್ಣಪುರ, ಕಾಸರವಳ್ಳಿ, ತೀರ್ಥಮುತ್ತೂರು, ಹಾಲ್ಮುತ್ತೂರು, ಭಂಡಿಗಡಿ, ಈಕಡೆ ಕಳ್ಳರಮನೆ, ಮಾವಿನ ಕಟ್ಟೆ, ಕಡ್ತೂರು, ಹೀಗೆ ಸುತ್ತಮುತ್ತಲಿನ ಎಲ್ಲಾ ಊರುಗಳಿಂದ ಹಣ ಸಂದಾಯವಾಗ್ತಾ ಇತ್ತು. ಆದರೆ ಇಂದು ಎಲ್ಲಾ ನಮ್ಮನಮ್ಮಲ್ಲೇ ಕಾಂಪಿಟೇಷನ್ ಗೆ ಬಿದ್ದವರಂತೆ ಅರೇಹಳ್ಳಿ, ರಾಮಕೃಷ್ಣಪುರ, ಕಡ್ತೂರು ಹೀಗೆ ಸುತ್ತಮುತ್ತಲ ಊರಿನಲ್ಲಿಯೂ ಗಣಪತಿ ಕೂರಿಸಲು ಪ್ರಾರಂಭಿಸಿದ್ದಾರೆ. ಹಣಕ್ಕಾಗಿ ಬಂಗಳೂರಿನಲ್ಲಿರುವ ಊರಿನವರನ್ನು ಸಂಪರ್ಕಿಸಲಾಗ್ತಾ ಇದೆ. ಫಲಿತಾಂಶ, ಬಹಳ ವಿಜೃಂಭಣೆಯಿಂದ ಆಗ್ತಾ ಇದ್ದ ಗಣೇಶೋತ್ಸವದ ಕಳೆ ಸೊಲ್ಪ ಕುಗ್ಗಿದೆ. ಆರೋಗ್ಯಕರ ಕಾಂಪಿಟೇಷನ್ ಇರಲಿ ಬಿಡಿ. ಅದು ಇದ್ದರೆನೇ ಬೆಳವಣಿಗೆ ಸಾಧ್ಯ. ಆದರೇ ಅದೇ ನಮ್ಮ ಬೆಳವಣಿಗೆಯನ್ನು ಕುಂಟಿಸಬಾರದಲ್ವೇ???
ಇಷ್ಟೆಲ್ಲಾ ಆದರೂ ಕಮ್ಮರಡಿಯ ಯುವಕರ ಹುಮ್ಮಸ್ಸು ಕಂದಿಲ್ಲ. ಸುತ್ತಮುತ್ತಲಿನ ಊರಿನ ಯುವಕರೂ ಕೈಜೋಡಿಸಿ ಏನಾದರೂ ಸರಿಯೆ ಗಣೇಶೋತ್ಸವವನ್ನ ವಿಜೃಂಭಣೆಯಿಂದ ಮಾಡಿಯೇ ತೀರುತ್ತೆವೆ ಎಂದು ಹಠಕ್ಕೆ ಬಿದ್ದವರಂತೆ ತೋರುತ್ತದೆ. 60ನೇ ವರ್ಷದ ಗಣೇಶೋತ್ಸವದ ಸವಿನೆನಪಿಗೆ ಬಯಲು ರಂಗಮಂದಿರ ನಿರ್ಮಿಸಿದ್ದಾರೆ. "ಅಮರನಾಥ ಯಾತ್ರೆ" ಪರಿಕಲ್ಪನೆಯ ಬಿಂಬಿಸುವ ಮಂಟಪ ನಿರ್ಮಿಸಿದ್ದಾರೆ. ಹಲವು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದಾರೆ.
"ಅಜ್ಜ ನೆಟ್ಟ ಆಲದ ಮರ"ದ ತರ ಹಿರಿದಾಗಿ ಬೆಳೆದಿರುವ ಸಂಘದ ಹಳೆಯ ಹಣ್ಣಾದ ಎಲೆಗಳು ಉದುರಿ ಹೊಸ ಚಿಗುರು ಬರಲು ದಾರಿ ಮಾಡಿದ್ದಾರೆ. ಹಿರಿಯರು ಕಟ್ಟಿದ ಈ ಸಂಘವನ್ನು ಅಷ್ಟೇ ಚೆನ್ನಾಗಿ, ಬೆಳೆಸುವ ಕರ್ತವ್ಯ ಹಾಗೂ ಜವಾಬ್ದಾರಿ ಹೊಸ ಯುವಕರ ಮೇಲಿದೆ. ಸಂಘಕ್ಕೆ 'ಷಷ್ಠಿಪೂರ್ತಿ'ಯಾದರೂ ನವಯುವಕರ ತಂಡ ಸಂಘವನು ಯುವಕನಂತೆ ಮಾಡಿದೆ. ಸಮಯವಾದರೆ ಕಮ್ಮರಡಿಯ ವಿದ್ಯಾಗಣಪತಿಯ ದರ್ಶನವ ಒಮ್ಮೆ ಮಾಡಿಬನ್ನಿ.
"ಸಂಘೇ ಶಕ್ತಿ ಕಲಿಯುಗೇ".
"ವಿದ್ಯಾ ಗಣಪತಿ" ಸಂಘಕ್ಕೆ 60ನೇ ಗಣೇಶೋತ್ಸವದ ಗಣೇಶೋತ್ಸವದ ಶುಭಾಶಯಗಳನ್ನ ಹೇಳುತ್ತಾ.....
- ಕೆ. ಸಿ. ಪಿ. ಕಾರಂತ್
ಕಮ್ಮರಡಿ




Comments
Post a Comment